ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್
ನವದೆಹಲಿ: ಸೆ.29ರಂದು ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಆಚರಿಸಲು ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ಯುಜಿಸಿ ಸುತ್ತೋಲೆಯ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ರಾಜಕೀಯವಲ್ಲ. ದೇಶಪ್ರೇಮವಷ್ಟೇ. ಯಾವುದನ್ನೂ ನಾವು ಕಡ್ಡಾಯ ಮಾಡಿಲ್ಲ. ಕೇವಲ ಸಲಹೆಗಳನ್ನಷ್ಟೇ ನೀಡಿದ್ದೇವೆ. ದಿನಾಚರಣೆಯಲ್ಲಿ ರಾಜಕೀಯವಲ್ಲ. ದೇಶಪ್ರೇಮವಷ್ಟೇ ಎಂದು ಹೇಳಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ದಿನಾಚರಣೆಯನ್ನು ಕಡ್ಡಾಯ ಮಾಡುವಂತೆ ಹಲವರು ಇಲಾಖೆ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ನಾವು ಸಂಸ್ಥೆಗಳಿಗಾಗಲೀ ಅಥವಾ ವಿದ್ಯಾರ್ಥಿಗಳಿಗಾಗಲೀ ಆಚರಣೆ ಕಡ್ಡಾಯ ಮಾಡಲಿಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಸಲಹೆಗಳು ಬಂದ ಹಿನ್ನಲೆಯಲ್ಲಿ ಕಾರ್ಯಕ್ರಮ ಕುರಿತು ನಾವು ಸುತ್ತೋಲೆಯನ್ನು ಹೊರಡಿಸಿದ್ದೇವೆ.
ಸೆ.29 ರಂದು ರಕ್ಷಣಾ ಪಡೆ ದೇಶವನ್ನು ಹೇಗೆ ರಕ್ಷಣೆ ಮಾಡುತ್ತದೆ ಎಂಬುದರ ಕುರಿತು ಮಾಹಿತಿ ನೀಡಲು, ಸರ್ಜಿಕಲ್ ಸ್ಟ್ರೈಕ್'ನ್ನು ಹೇಗೆ ನಡೆಸಲಾಯಿತು ಎಂಬುದರ ಮಾಹಿತಿಯನ್ನು ವಿದ್ಯಾರ್ಥಿಗಲಿಗೆ ನೀಡಲು ಸೇನಾ ಮಾಜಿ ಅಧಿಕಾರಿಗಳನ್ನು ಕರೆಸಿ ಕಾಲೇಜುಗಳಲ್ಲಿ ಭಾಷಣ ಮಾಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
2016ರ ಸೆಪ್ಟೆಂಬರ್ 29 ರಂದು ಭಾರತೀಯ ವೀರ ಯೋಧರು ಪಾಕಿಸ್ತಾನ ಆಕ್ರಮಿಕ ಕಾಶ್ಮೀರದ ಗಡಿಯಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿ ವಾಪಸ್ಸಾಗಿದ್ದರು.