ನವದೆಹಲಿ: ಕಾಂಗ್ರೆಸ್ ನಂತರ ಇದೀಗ ಬಿಜೆಪಿಗೂ ಬಿಸಿ ಮುಟ್ಟಿಸಿದ ಸಾಮಾಜಿಕ ಜಾಲತಾಣ, ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್’ಗೆ ಸಂಬಂಧಿಸಿದ ಒಟ್ಟು 15 ಪೇಜ್ಗಳನ್ನ ಡಿಲೀಟ್ ಮಾಡಿದೆ.
ಲೋಕಸಭೆ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಫೇಸ್ಬುಕ್, ಟ್ವಿಟರ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಚಾರದ ಅಬ್ಬರ, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಈ ಹಿನ್ನೆಲೆಯಲ್ಲಿ ಫೇಸ್ಬುಕ್ ಕೆಲವು ಅನಧಿಕೃತ ಖಾತೆ, ಪೇಜ್ ಗಳನ್ನು ತೆಗೆದುಹಾಕುತ್ತಿದ್ದು, ನಮೋ ಆ್ಯಪ್ ನೊಂದಿಗೆ ನಂಟು ಹೊಂದಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸಿಲ್ವರ್ ಟಚ್ ಗೆ ಸಂಬಂಧಿಸಿದ 15 ಖಾತೆಗಳನ್ನ ರಿಮೂವ್ ಮಾಡಲಾಗಿದೆ ಎಂದು ಫೇಸ್ಬುಕ್ ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕು ಮುನ್ನ ಕಾಂಗ್ರೆಸ್ನ ಐಟಿ ಸೆಲ್ಗೆ ಸಂಬಂಧಿಸಿದ 687 ಅನಧಿಕೃತ ಪೇಜ್ ಗಳನ್ನು ತೆಗೆದು ಹಾಕಿತ್ತು. ಅಲ್ಲದೇ ಪಾಕಿಸ್ತಾನ ಸೇನೆಗೆ ಸಂಬಂಧಿಸಿದ ಕೆಲ ಖಾತೆಗಳನ್ನೂ ತೆಗೆದು ಹಾಕಿತ್ತು. ಇದೀಗ ನಮೋ ಆ್ಯಪ್ ಮೇಲೆ ಕಣ್ಣಿಟ್ಟಿರುವ ಫೇಸ್ಬುಕ್, ಸಿಲ್ವರ್ ಐಟಿ ಸಂಸ್ಥೆಗೆ ಸಂಬಂಧಿಸಿದ 15 ಫೇಸ್ಬುಕ್ ಪೇಜ್ಗಳನ್ನ ಡಿಲೀಟ್ ಮಾಡಿದೆ. ಅಲ್ಲದೇ ಸಿಲ್ವರ್ ಟಚ್ ಸಂಸ್ಥೆ ವಿರುದ್ಧ ಕ್ರಮಕಕ್ಕೆ ಮುಂದಾಗಿದೆ ಅಂತಾ ಫೇಸ್ಬುಕ್ ತಿಳಿಸಿದೆ.