ದೇಶ

ಕಾಶ್ಮೀರ ಹೆದ್ದಾರಿಯಲ್ಲಿ ನಾಗರಿಕ ವಾಹನ ಸಂಚಾರ ನಿಷೇಧ; 'ಸರ್ಕಾರದ ಬುದ್ದಿ ಹೀನ ನಡೆ' ಎಂದ ವಿಪಕ್ಷಗಳು

Srinivasamurthy VN
ಶ್ರೀನಗರ: ಪುಲ್ವಾಮ ಉಗ್ರ ದಾಳಿ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಾರದಲ್ಲಿ 2 ದಿನ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಾರಿಮಾಡಲಾಗಿದ್ದ ನಿಯಮ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಸೇನೆ ಮತ್ತು ಸರ್ಕಾರದ ಈ ನಡೆಯನ್ನು ಬುದ್ದಿ ಹೀನ ನಡೆ ಎಂದು ವಿಪಕ್ಷಗಳು ಟೀಕಿಸಿವೆ.
ಹೆದ್ದಾರಿ ಸಂಚಾರ ನಿಷೇಧಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯಾಡಳಿತ ಕೈಗೊಂಡಿರುವ ಕ್ರಮದ ವಿರುದ್ಧ ರಾಜಕೀಯ ಪಕ್ಷಗಳು ಹಾಗೂ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಭದ್ರತಾ ದೃಷ್ಟಿಯಿಂದಾಗಿ ನಾಗರಿಕ ವಾಹನಗಳ ಸಂಚಾರವನ್ನು ಈ ಹಿಂದೆ ಯಾವತ್ತಿಗೂ ನಿಷೇಧಿಸಿರಲಿಲ್ಲ. ಸೇನೆ ಮತ್ತು ರಾಜ್ಯಾಡಳಿತ ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ಕಠಿಣ ಕ್ರಮ ಅನುಸರಿಸಲಾಗುತ್ತಿದೆ ಎಂದು ಕಿಡಿಕಾರಿವೆ. 
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ನಿಜಕ್ಕೂ ಇದು ಸರಿಯಾದ ನಡೆಯಲ್ಲ. ಕಾಶ್ಮೀರಿಗಳ ಮೂಲಭೂತ ಹಕ್ಕುಗಳನ್ನು ಈ ರೀತಿಯ ನೆಪವೊಡ್ಡಿ ತಡೆ ಹಿಡಿಯಲಾಗದು. ಇದು ನಮ್ಮ ರಾಜ್ಯ, ನಮ್ಮ ನೆಲ.. ನಮ್ಮ ರಸ್ತೆಗಳನ್ನು ಬಳಕೆ ಮಾಡಲೂ ಕೂಡ ನಾವು ಅನುಮತಿ ಪಡೆಯಬೇಕೆ ಎಂದು ಕಿಡಿಕಾರಿದ್ದಾರೆ.
ಇದೇ ವಿಚಾರವಾಗಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮಾತನಾಡಿದ್ದು, ಅವರು ಸೈನಿಕರ ರವಾನೆ ಮಾಡಲು ರೈಲನ್ನು ಬಳಕೆ ಮಾಡಬಹುದಾಗಿತ್ತು. ಅಥವಾ ರಾತ್ರಿ ವೇಳೆ ಪುಯಾಣ ಮಾಡಿಸಬಹುದಿತ್ತು. ಅದನ್ನು ಬಿಟ್ಟು ನಾಗರೀಕರಿಗೆ ಹೆದ್ದಾರಿ ಸಂಚಾರ ನಿಷೇಧ ಮಾಡುವ ಮೂಲಕ ಅವರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಇದು ನಿಜಕ್ಕೂ ಸ್ಥಳೀಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದೇ ವಿಚಾರವಾಗಿ ವ್ಯಾಪಾರಸ್ಥರ ಒಕ್ಕೂಟದ ಮುಖಂಡರು ತಮ್ಮ ಬಳಿ ಬಂದು ಅಳಲು ತೋಡಿಕೊಂಡಿದ್ದರು. ಈ ನಿಯಮದಿಂದಾಗಿ ಅವರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ನಿಯಮದಿಂದ ತಾವು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಇದು ನಿಜಕ್ಕೂ ಸರ್ವಾಧಿಕಾರಿ ಧೋರಣೆಯೇ... ಕೂಡಲೇ ಈ ನಿಯಮವನ್ನು ಹಿಂತೆಗೆದುಕೊಳ್ಳಬೇಕು ಎಂದು ಫಾರೂಕ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಕೂಡ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ನಡೆ ಬುದ್ದಿಹೀನವಾಗಿದ್ದು, ನಾಗರೀಕ ಸಂಚಾರವನ್ನು ತಡೆ ಹಿಡಿಯುವ ಮೂಲಕ ಸರ್ಕಾರವೇ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
SCROLL FOR NEXT