ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರಿಗೆ ಸೇರಿದ ಒಂದು ಡಜನ್ ಲಕ್ಸುರಿ ಕಾರುಗಳನ್ನು 3. 29 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ ಇಂದು ತಿಳಿಸಿದೆ. ಈ ಹಿಂದೆ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಈ ಕಾರುಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿತ್ತು.
ಬ್ಯಾಂಕುಗಳಿಗೆ ಹಣ ವಂಚನೆ ಪ್ರಕರಣದಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮೋದಿ ಹಾಗೂ ಚೋಕ್ಸಿಗೆ ಸೇರಿದ 13 ಲಕ್ಸುರಿ ಕಾರುಗಳನ್ನು ವಶಕ್ಕೆ ಪಡೆಯಲು ಮಾರ್ಚ್ ತಿಂಗಳಲ್ಲಿ ಮುಂಬೈಯ ಪಿಎಂಎಲ್ ಎ ವಿಶೇಷ ನ್ಯಾಯಾಲಯದಿಂದ ಇಡಿ ಅನುಮತಿ ಪಡೆದುಕೊಂಡಿತ್ತು. ಎಂಎಸ್ ಟಿಸಿ ಕಂಪನಿಯಿಂದ ಇ- ಹರಾಜು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
13 ಕಾರುಗಳ ಪೈಕಿ 11 ನೀರವ್ ಮೋದಿ ಸಮೂಹಕ್ಕೆ 2 ಮೆಹುಲ್ ಚೋಕ್ಸಿ ಸಮೂಹಕ್ಕೆ ಸೇರಿದ್ದು, ಎಂಎಸ್ ಟಿಸಿ ಮೂಲಕ ನಿನ್ನೆ ಇ- ಹರಾಜು ಮಾಡಲಾಗಿದೆ. ಈ 13 ಕಾರುಗಳ ಪೈಕಿ 12 ಕಾರುಗಳಿಗೆ 3 ಕೋಟಿ 28 ಲಕ್ಷದ 94 ಸಾವಿರದ 293 ರೂಪಾಯಿಗೆ ಯಶಸ್ವಿಯಾಗಿ ಬಿಡ್ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ ಕಳೆದ ತಿಂಗಳು ನೀರವ್ ಮೋದಿಗೆ ಸೇರಿರುವ ಕೆಲವು ಕಲಾಕೃತಿಗಳನ್ನು 59. 37 ಕೋಟಿ ರೂಪಾಯಿಗೆ ಹರಾಜು ಮಾಡಿತ್ತು.
ಇತ್ತೀಚಿಗೆ ಲಂಡನ್ ನಲ್ಲಿ ಬಂಧಿಸಲಾಗಿರುವ ನೀರವ್ ಮೋದಿಯನ್ನು ಹಸ್ತಾಂತರಕ್ಕೆ ಭಾರತ ಪ್ರಯತ್ನಿಸುತ್ತಿದೆ. ಕೆರಿಬಿಯನ್ ರಾಷ್ಟ್ರದ ನಾಗರಿಕತ್ವ ಪಡೆದಿರುವ ಮೆಹುಲ್ ಚೋಕ್ಸಿ ಕೂಡಾ ಇದೇ ರೀತಿಯ ಕಾನೂನು ಕ್ರಮ ಎದುರಿಸುತ್ತಿದ್ದಾರೆ.