ದೇಶ

ಪಾರ್ಥಿವ ಶರೀರದ ಎದುರು ಭಾವುಕರಾದ ಪ್ರಧಾನಿ; ಬಿಜೆಪಿ ನಾಯಕರಿಗೆ ಪ್ರೀತಿಯ 'ಅಕ್ಕ'ನಾಗಿದ್ದ ಸುಷ್ಮಾ ಸ್ವರಾಜ್

Sumana Upadhyaya
ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನ ಸುದ್ದಿ ಕೇಳಿ ದೇಶಾದ್ಯಂತ ಜನರಿಗೆ ಆಘಾತವನ್ನುಂಟುಮಾಡಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಅಪಾರ ಸಂಖ್ಯೆಯಲ್ಲಿ ಕಂಬನಿ ಮಿಡಿಯುತ್ತಿದ್ದಾರೆ. 

ಇಂದು ಬೆಳಗ್ಗೆ ಸುಷ್ಮಾ ಸ್ವರಾಜ್ ನಿವಾಸಕ್ಕೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅಗಲಿದ ನಾಯಕಿಗೆ ಗೌರವ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

ನಂತರ ಸ್ವಲ್ಪ ಹೊತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಲೋಕಸಭಾಧ್ಯಕ್ಷರು, ಕೇಂದ್ರದ ಸಚಿವರು, ಸಂಸದರು, ಪಕ್ಷಾತೀತವಾಗಿ ರಾಜಕೀಯ ನಾಯಕರು, ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. 

ಕಳೆದ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ನಿಧನರಾದ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಜನಪತ್ ರಸ್ತೆಯಲ್ಲಿರುವ ದವನ್ ದೀಪ್ ಬಿಲ್ಡಿಂಗ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಂದ ಈಗ ಪಾರ್ಥಿವ ಶರೀರವನ್ನು ಬಿಜೆಪಿ ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ರಾಜಕೀಯ ನಾಯಕರು ಮತ್ತು ಇತರ ಗಣ್ಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಲೋಧಿ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಸುಷ್ಮಾ ಸ್ವರಾಜ್ ನಿಧನ ಹಿನ್ನಲೆಯಲ್ಲಿ ಬಿಜೆಪಿಯ ಇಂದಿನ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. 

ಸುಷ್ಮಾ ಸ್ವರಾಜ್ ಅವರು ಮುಖ್ಯಮಂತ್ರಿಯಾಗಿದ್ದ ದೆಹಲಿಯಲ್ಲಿ ಎರಡು ದಿನಗಳ ಶೋಕಾಚರಣೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದ ಅಮ್ರೊಹದ ಮೊಹಮ್ಮದ್ ಝುಹೈಬ್ ಎಂಬುವವರು ಇದ್ದಿಲಿನಲ್ಲಿ ಸುಷ್ಮಾ ಸ್ವರಾಜ್ ಭಾವಚಿತ್ರವನ್ನು ಮಾಡಿ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ.ದೇಶಾದ್ಯಂತ ಅವರ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಗಲಿದ ನಾಯಕಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
SCROLL FOR NEXT