ದೇಶ

ಭಾರತದಲ್ಲಿ ಜನ ನೆಮ್ಮದಿಯಾಗಿ ಬದುಕಲು ಬಿಜೆಪಿಗೆ ಪರ್ಯಾಯ ಶಕ್ತಿ ಬೇಕು; ಶರದ್ ಪವಾರ್

Srinivasamurthy VN

ನಾಗಪುರ: ಜನ ಸಾಮಾನ್ಯರು ದೇಶದಲ್ಲಿ ನೆಮ್ಮದಿಯಾಗಿ ಬದುಕಲು ಮತ್ತು ನಮ್ಮ ಭಾರತ ದೇಶವನ್ನು ಉಳಿಸಿಕೊಳ್ಳಲು ಬಿಜೆಪಿಗೆ ಪರ್ಯಾಯವಾದ ಶಕ್ತಿಯೊಂದನ್ನು ಕಟ್ಟಲೇಬೇಕಾದ ಅಗತ್ಯವಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಅಭಿಪ್ರಾಯಪಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟವೆಗಳ ಹಿನ್ನಲೆಯಲ್ಲಿ ಮಾತನಾಡಿದ ಶರದ್ ಪವಾರ್ ಅವರು, 'ದೇಶದ ಹಲವು ಕಡೆಗಳಲ್ಲಿ ಬಿಜೆಪಿ ವಿರೋಧಿ ಭಾವನೆ ಜನರಲ್ಲಿ ಹೆಚ್ಚುತ್ತಿದೆ ಎಂಬುದಕ್ಕೆ ಹಲವು ಸೂಚನೆಗಳಿವೆ. ದೇಶದಲ್ಲಿ ಜನ ನೆಮ್ಮದಿಯಿಂದ ಬದುಕಲು ಮತ್ತು ನಮ್ಮ ಭಾರತ ದೇಶವನ್ನು ಉಳಿಸಿಕೊಳ್ಳಲು ಬಿಜೆಪಿ ಗೆ ಪರ್ಯಾಯವಾದ ಶಕ್ತಿಯೊಂದನ್ನು ಕಟ್ಟಲೇಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಂತೆಯೇ 'ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ವೇಳೆ ಅಶಾಂತಿಯ ವಾತಾವರಣ ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಲಿದೆ ಎಂದು ಬಿಜೆಪಿ ಊಹಿಸಿತ್ತು. ಆದರೆ, ಈಗ ಅಶಾಂತಿ ಎಂಬುದು ರಾಷ್ಟ್ರವ್ಯಾಪಿ ಹರಡುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಅಸ್ಸಾಂ ರಾಜ್ಯದಲ್ಲೇ ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ತಾರಕಕ್ಕೇರಿದೆ. ಅಸಲಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಎಷ್ಟು ಜನರನ್ನು ಜೈಲಿನಲ್ಲಿಡಲಿದೆ? ಕಾರಾಗೃಹದಲ್ಲಿ ಎಷ್ಟು ದಿನಗಳ ಕಾಲ ಬಂಧಿತರನ್ನು ಇಡಲು ಸಾಧ್ಯ? ಎಂದು ಪವಾರ್ ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ಈ ಕುರಿತು ಚರ್ಚಿಸಲು ಬಿಜೆಪಿ ಅಲ್ಲದ ಇತರ ಪಕ್ಷಗಳ ಒಕ್ಕೂಟ ಶೀಘ್ರದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಪವಾರ್ ಹೇಳಿದರು.

SCROLL FOR NEXT