ಪಶ್ಚಿಮ ಬಂಗಾಳ ಬಿಜೆಪಿ ರ್ಯಾಲಿಯಲ್ಲಿ ಭಾರಿ ಜನಸ್ತೋಮ: ಕಾಳ್ತುಳಿತದ ಭೀತಿಯ ನಡುವೆ ಭಾಷಣ ಮೊಟಕುಗೊಳಿಸಿದ ಪ್ರಧಾನಿ ಮೋದಿ!
ಠಾಕೂರ್ ನಗರ್: ಪಶ್ಚಿಮ ಬಂಗಾಳದ ಠಾಕೂರ್ ನಗರ್ ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಷಣ ಕೇಳಲು ಜನಸ್ತೋಮವೇ ಹರಿದುಬಂದಿತ್ತು. ಈ ವೇಳೆ ಕಾಲ್ತುಳಿತದ ಮಾದರಿಯ ಪರಿಸ್ಥಿತಿ ಉಂಟಾಗಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮೊಟಕುಗೊಳಿಸಿದ್ದಾರೆ.
ಫೆ.02 ರಂದು ಬಿಜೆಪಿ ರ್ಯಾಲಿಯಲ್ಲಿ ಮೋದಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಕಾಲ್ತುಳಿತದ ಪರಿಸ್ಥಿತಿ ಉಂಟಾಗುವ ಭೀತಿ ಎದುರಾಗಿತ್ತು. ಶಾಂತಿ- ಶಿಷ್ಟಾಚಾರ ಪಾಲಿಸುವಂತೆ ಭಾಷಣದ ನಡುವೆ ಪ್ರಧಾನಿ ಮೋದಿ ಮನವಿ ಮಾಡಿದರೂ ಸಹ ಕಾಲ್ತುಳಿತದ ಪರಿಸ್ಥಿತಿಯ ಭೀತಿ ಕಡಿಮೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಕೆಲವೇ ನಿಮಿಷಗಳಿಗೆ ಸೀಮಿತಗೊಳಿಸಿದರು.
ಮಾತನಾಡಿದಷ್ಟೇ ವೇಳೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರ್ಯಾಲಿಗೆ ನೆರೆದಿರುವ ಜನಸ್ತೋಮವನ್ನು ನೋಡಿದರೆ ಮಮತಾ ಬ್ಯಾನರ್ಜಿ ಏಕೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವವರು ಮುಗ್ಧ ಜನರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಮೋದಿ ದೀದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಪೌರತ್ವ ಮಸೂದೆಗೆ ಬೆಂಬಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಜನತೆಗೆ ಮನವಿ ಮಾಡಿದ್ದಾರೆ.