ದೇಶ

ವಾಯುಪಡೆ ದುರ್ಬಲಗೊಳಿಸಲು ಕಾಂಗ್ರೆಸ್ ಪಿತೂರಿ: ಪ್ರಧಾನಿ ಮೋದಿ

Lingaraj Badiger
ನವದೆಹಲಿ: ಭಾರತೀಯ ವಾಯು ಪಡೆಯನ್ನು ದುರ್ಬಲಗೊಳಿಸುವ ಪಿತೂರಿಯನ್ನು ಕಾಂಗ್ರೆಸ್‍ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಆರೋಪಿಸಿದ್ದಾರೆ. 
ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, ಭಾರತೀಯ ವಾಯು ಪಡೆ ಬಲಿಷ್ಠವಾಗಿರಲು ಹಾಗೂ ಅದು ಅಗತ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‍ ಪಕ್ಷ ಬಯಸುತ್ತಿಲ್ಲ ಎಂದರು.
ರಫೇಲ್‍ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಸರ್ಕಾರ, ಅಂತಿಮಗೊಳಿಸಿರುವ ಕುರಿತಂತೆ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಮುಖಂಡರು ಅಸಮಧಾನಗೊಂಡಿದ್ದಾರೆ. ಮೊದಲ ಬಾರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ರಕ್ಷಣಾ ಒಪ್ಪಂದವನ್ನು ಅಂತಿಮಗೊಳಿಸಿರುವುದನ್ನು ಮನಗಂಡ ಕಾಂಗ್ರೆಸ್ ನಾಯಕರು ದಿಗ್ಬ್ರಮೆಗೊಳಗಾಗಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಕ್ರಿಶ್ಚಿಯನ್‍ ಮಿಶೆಲ್‍ ಮತ್ತು ಒಟ್ಟೊವಿಯೊ ಕ್ವಟ್ರೋಚಿ ಅವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ನರೇಂದ್ರ ಮೋದಿ ಅವರು' ಕಾಂಗ್ರೆಸ್‍ ಪಕ್ಷಕ್ಕೆ ಪೋಷಕರು ಸದಾ ಇರುತ್ತಿದ್ದರು' ಎಂದು ದೂರಿದರು. 
ರಕ್ಷಣಾ ಒಪ್ಪಂದಗಳಲ್ಲಿ ಮಧ್ಯವರ್ತಿಗಳಾಗಿದ್ದ ಮೂವರನ್ನು ತನಿಖಾ ಸಂಸ್ಥೆಗಳು ಭಾರತಕ್ಕೆ ಕರೆತಂದು ವಿಚಾರಣೆ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೇಸರವಾಗಿದೆ ಎಂದು ಪ್ರಧಾನಿ ಲೇವಡಿ ಮಾಡಿದ್ದಾರೆ.
SCROLL FOR NEXT