ಮದ್ಯಮ ವರ್ಗಕ್ಕೆ ಮೀಸಲು: ನಿರ್ಧಾರ ಪ್ರಕ್ರಿಯೆಗಳ ವಿವರ ಬಹಿರಂಗಕ್ಕೆ ಕೇಂದ್ರ ನಕಾರ
ನವದೆಹಲಿ: ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಕ್ಕೆ (ಇಡಬ್ಲ್ಯುಎಸ್) ಶೇ. 10 ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಕಾನೂನು ಜಾರಿ ಹಿಂದಿನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಳ್ಳಲು ಭಾರತ ಸರ್ಕಾರ ನಿರಾಕರಿಸಿದೆ. ಆರ್ ಟಿಐ ಕಾಯ್ದೆಯಡಿಯಲ್ಲಿ ಸಚಿವ ಸಂಪುಟಗಳ ದಾಖಲೆಗಳು ಮತ್ತು ಅಲ್ಲಿನ ಚರ್ಚೆಗಳ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ (ಸಿಎಚ್ಆರ್ಐ) ಎನ್ ಜಿಓ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೆಂಕಟೇಶ್ ನಾಯಕ್ ಮದ್ಯಮವರ್ಗದ ಮೀಸಲಾತಿ ನಿರ್ಧಾರದ ಹಿಂದಿನ ಪ್ರಕ್ರಿಯೆಗಳನ್ನು ಬಹಿರಂಗಗೊಳಿಸಬೇಕೆಂದು ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಯಾವ ವಿಷಯವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಕಚೇರಿ (ಪಿಎಂಒ) ಹೇಳಿದೆ.
ಫೆಬ್ರವರಿ 1, 2019 ರಿಂದ ಕೇಂದ್ರ ಸರ್ಕಾರಿ ಉದ್ಯೋಗಗಳು ಹಾಗೂ ಸೇವೆಗಳಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಶೇ 10 ಮೀಸಲಾತಿ ನೀತಿಯನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ.
ನಾಯಕ್ ಅವರ ಆ ಟಿಐ ಪ್ರಶ್ನೆಗೆ ಉತ್ತರವಾಗಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪಾರದರ್ಶಕತೆ ಕಾನೂನಿನ ಸೆಕ್ಷನ್ 8 (1) (ಐ) ಅಡಿಯಲ್ಲಿ ಈ ಪ್ರಶ್ನೆಗಳಿಗೆ ಅವಕಾಶವಿಲ್ಲ ಎಂದು ಹೇಳಿದೆ.