ಕೊಚ್ಚಿ: ಖ್ಯಾತ ಪವಿತ್ರ ಯಾತ್ರಾ ತಾಣ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿ ದರ್ಶನ ಪಡೆದ ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ದೇಗುಲವನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂದು ಮುಂಜಾನೆ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದರು. ಈ ವಿಚಾರ ತಿಳಿದ ಬೆನ್ನಲ್ಲೇ ಇದೀಗ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ದೇಗುಲದಲ್ಲಿ ಶುದ್ದೀಕರಣ ಕಾರ್ಯ ಮಾಡಲಾಗುತ್ತಿದೆ.
ದೇವಸ್ವಂ ಮಂಡಳಿಯ ಪ್ರಧಾನ ಅರ್ಚಕರ ನೇತೃತ್ವದಲ್ಲಿ ದೇಗುಲದಲ್ಲಿ ಶುದ್ಧೀಕರಣ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಶುದ್ಧೀಕರಣದ ಬಳಿಕ ಅಯ್ಯಪ್ಪ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.