ನವದೆಹಲಿ: ಮೇಘಾಲಯದಲ್ಲಿ ಸಂಭವಿಸಿದ ಗಣಿ ದುರಂತದಲ್ಲಿ ಸಿಲುಕಿರುವ 15 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣ ಸಂಬಂಧ ಮೇಘಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಬದುಕಿದ್ದಾರೋ ಅಥವಾ ಸತ್ತಿದ್ದಾರೋ, ಕಾರ್ಮಿಕರನ್ನು ಹೊರ ತೆಗೆಯಲೇಬೇಕೆಂದು ತಾಕೂತು ಮಾಡಿದೆ.
ಡಿ.13 ರಂದು ಕಾರ್ಮಿಕರು ಗಣಿ ದುರಂತದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ. ರಕ್ಷಣಾ ಕಾರ್ಯಾಚರಣೆ ನಮಗೆ ತೃಪ್ತಿ ತಂದಿಲ್ಲ. ಅವರು ಸತ್ತಿದ್ದಾರೋ, ಬದುಕಿದ್ದಾರೋ ಅದರ ಅಗತ್ಯವಿಲ್ಲ. ಆದರೆ, ಅವರನ್ನು ಹೊರ ತೆಗೆಯಲೇ ಬೇಕು. ಕಾರ್ಮಿಕರು ಬದುಕುಳಿದು ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆಂದು ಹೇಳಿದೆ.
ಡಿ.13 ರಂದು ಮೇಘಾಲಯದಲ್ಲಿ ಗಣಿ ದುರಂತ ಸಂಭವಿಸಿತ್ತು. ಲುಮಥರಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಸುಮಾರು 370 ಅಡಿ ಆಳದಲ್ಲಿ 15 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಸರ್ಕಾರ ಹರಸಾಹಸ ಪಡುತ್ತಿದೆ. ಭಾರತೀಯ ನೌಕಾಪಡೆಯ 14 ಸದಸ್ಯರು 72 ಎನ್'ಡಿಆರ್'ಎಫ್ ಯೋಧರು, 21 ಒಡಿಶಾ ಅಗ್ನಿಶಾಮಕ ದಳದ ಸಿಬ್ಬಂದಿಗಳು, 35 ಕೋಟ್ ಇಂಡಿಯಾ ಲಿಮಿಟೆಡ್ ಅದಿಕಾರಿಗಳು ಹಾಗೂ ಮೇಘಾಲಯ ಸ್ವಾಮ್ಯದ ರಾಜ್ಯ ವಿಪತ್ತು ನಿರ್ವಹಣೆಪಡೆಗಳ ತಂಡ ಸೇರಿ ಒಟ್ಟು 200ಕತ್ಕೂ ಹೆಚ್ಚು ತುರ್ತು ಕಾರ್ಯನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.