ದೇಶ

ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ರಾಜಿನಾಮೆ, ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ!

Srinivasamurthy VN
ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಮುಖಂಡ ಅಜಯ್ ಮಕೇನ್ ರಾಜಿನಾಮೆ ನೀಡಿದ್ದಾರೆ.
ಮೂಲಗಳ ಪ್ರಕಾರ ನಿನ್ನೆ ತಡರಾತ್ರಿ ದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದ ಅಜಯ್ ಮಕೇನ್ ಅವರು ಅಧಿಕೃತವಾಗಿ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಅಂತೆಯೇ ರಾಹುಲ್ ಗಾಂಧಿ ಅವರೂ ಕೂಡ ಮಕೇನ್ ಅವರ ರಾಜಿನಾಮೆಯನ್ನು ಸ್ವೀಕರಿಸಿದ್ದು ಅಂಗೀಕರಿಸಿದ್ದಾರೆ ಎನ್ನಲಾಗಿದೆ. ಮಕೇನ್ ಅವರು ತಮ್ಮ ರಾಜಿನಾಮೆಗೆ ಅನಾರೋಗ್ಯ ಕಾರಣ ನೀಡಿದ್ದಾರೆ.
ಇನ್ನು ಮಕೇನ್ ರಾಜಿನಾಮೆಯಿಂದಾಗಿ ತೆರವಾದ ಸ್ಥಾನಕ್ಕೆ ಮತ್ತೋರ್ವ ಕಾಂಗ್ರೆಸ್ ಮುಖಂಡ ಪಿಸಿ ಚಾಕೋ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇನ್ನು ಮಕೇನ್ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
54 ವರ್ಷದ ಅಜಯ್ ಮಕೇನ್ ಅವರು ಕಳೆಗ ನಾಲ್ಕು ವರ್ಷಗಳ ಹಿಂದೆ ಅದರೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಲೋಕಸಭೆ ಮೇಲೆ ಕಣ್ಣು, ಗರಿಗೆದರಿದ ರಾಜಕೀಯ ಚಟುವಟಿಕೆ
ಇನ್ನು ಪ್ರಸ್ತುತ ಮಕೇನ್ ಅವರು ವೈಯುಕ್ತಿಕ ಹಾಗೂ ಅನಾರೋಗ್ಯದ ಕಾರಣ ನೀಡಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆಯಾದರೂ, ಮಕೇನ್ ರಾಜಿನಾಮೆ ಹಿಂದೆ ಕಾಂಗ್ರೆಸ್ ಹೈಕಮಾಂಡ್ ತಂತ್ರಗಾರಿಕೆ ಅಡಗಿದೆ ಎಂದು ಹೇಳಾಗುತ್ತಿದೆ. ಹೌದು.. ಮುಂಬರುವ 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷ ತನ್ನ ಹಿರಿಯ ನಾಯಕರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯುತ್ತಿದೆ. ಇದೇ ಕಾರಣಕ್ಕೆ ಅಜಯ್ ಮಕೇನ್ ರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯಲು ರಾಜಿನಾಮೆ ಕೊಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
SCROLL FOR NEXT