ದೇಶ

ರೋಸ್‌ ವ್ಯಾಲಿ ಹಗರಣ: ಬಂಗಾಳಿ ಚಲನಚಿತ್ರ ನಿರ್ಮಾಪಕ ಶ್ರೀಕಾಂತ್‌ ಮೊಹ್ತ ಬಂಧನ

Srinivas Rao BV
ಕೊಲ್ಕತ್ತ: ಬಹುಕೋಟಿ ರೋಸ್‌ ವ್ಯಾಲಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಶ್ರೀ ವೆಂಕಟೇಶ್ ಫಿಲ್ಮ್ (ಎಸ್‌ವಿಎಫ್‌) ಮುಖ್ಯಸ್ಥ ಶ್ರೀಕಾಂತ್‌ ಮೊಹ್ತ ಅವರನ್ನು ಬಂಧಿಸಿದೆ. 
ರೋಸ್‌ವ್ಯಾಲಿ ಹಗರಣದಲ್ಲಿ ಅಕ್ರಮ ಹಣಕಾಸು ವಹಿವಾಟಿನ ಆರೋಪಗಳ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳು ಗುರುವಾರ ಶ್ರೀಕಾಂತ್‌ ಮೊಹ್ತ ಅವರನ್ನು ಎರಡು ತಾಸು ವಿಚಾರಣೆ ನಡೆಸಿ, ನಂತರ ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
ಟಾಲಿವುಡ್‌ನ ಅತಿದೊಡ್ಡ ನಿರ್ಮಾಪಕರೆನಿಸಿರುವ ಮೊಹ್ತಾ ವಿರುದ್ಧ ರೋಸ್‌ ವ್ಯಾಲಿ ಸಮೂಹದ ಅಧ್ಯಕ್ಷ ಗೌತಮ್‌ ಕುಂಡು ಅವರಿಗೆ 25 ಕೋಟಿ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ. 
ಚಲನಚಿತ್ರ ನಿರ್ಮಿಸಲು ಗೌತಮ್‌ ಕುಂಡು ಅವರಿಂದ ಮೊಹ್ತಾ 25 ಕೋಟಿ ರೂ. ಪಡೆದಿದ್ದರು. ಆದರೆ, ಚಿತ್ರ ನಿರ್ಮಾಣ ಆರಂಭವಾಗದ ಹಿನ್ನೆಲೆಯಲ್ಲಿ ಕುಂಡು ಅವರು ಮೊಹ್ತಾ ವಿರುದ್ಧ ಪ್ರಕರಣ ದಾಖಲಿಸಿದ್ದರು.  ನ್ಯಾಯಾಲಯದ ಮುಂದೆ ಹಾಜರುಪಡಿಸಲು ಮೊಹ್ತಾ ಅವರನ್ನು ಸಿಬಿಐ ಅಧಿಕಾರಿಗಳು ಭುವನೇಶ್ವರಕ್ಕೆ ಕರೆದೊಯ್ಯಲಿದ್ದಾರೆ. 
ಸಿಬಿಐ ಅಧಿಕಾರಿಗಳು ಮೊಹ್ತಾ ಅವರನ್ನು ವಿಚಾರಣೆಗಾಗಿ ಸಿಜಿಒ ಕಾಂಪ್ಲೆಕ್ಸ್‌ಗೆ ಕರೆದೊಯ್ಯುವ ಮುನ್ನ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮೊಹ್ತ ನಾಟಕವನ್ನಾಡಿದ್ದಾರೆ. ಕೆಲ ದುಷ್ಕರ್ಮಿಗಳು ತಮ್ಮ ಕಚೇರಿಯಲ್ಲಿ ಗಲಾಟೆ ಮಾಡಲು ಬಂದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ದುಷ್ಕರ್ಮಿಗಳೆನ್ನಲಾದ ವ್ಯಕ್ತಿಗಳು ಸಿಬಿಐ ಅಧಿಕಾರಿಗಳೆಂದು ಗೊತ್ತಾದ ನಂತರ ಪೊಲೀಸ್‌ ಠಾಣೆಗೆ ವಾಪಸ್ಸಾಗಿದ್ದಾರೆ.
SCROLL FOR NEXT