ದೇಶ

ಜನವರಿ 27-28ರಂದು ಪ್ರಧಾನಿ ಮೋದಿಗೆ ನೀಡಿದ ಉಡುಗೊರೆ ಹರಾಜು

Lingaraj Badiger
ನವದೆಹಲಿ: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಉಡುಗೊರೆಗಳನ್ನು ಸರ್ಕಾರ ಜನವರಿ 27 ಮತ್ತು 28ರಂದು ಸಾರ್ವಜನಿಕವಾಗಿ ಹರಾಜು ಹಾಕಲಿದೆ.
ಕಳೆದ ನಾಲ್ಕುವರೆ ವರ್ಷಗಳಲ್ಲಿ ಪ್ರಧಾನಿ ಮೋದಿಗೆ ನೀಡಿದ ಎಲ್ಲಾ ಉಡುಗೊರೆಗಳನ್ನು ಜನವರಿ 27 ಮತ್ತು 28 ರಂದು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಹರಾಜು ಹಾಕಲಾಗುತ್ತಿದ್ದು, ಇದರಿಂದ ಸಂಗ್ರಹವಾಗುವ ಮೊತ್ತವನ್ನು ಗಂಗಾ ನದಿ ಶುದ್ಧೀಕರಣ(ನಮಾಮಿ ಗಂಗೆ) ಯೋಜನೆಗೆ ಬಳಸಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಡಾ.ಮಹೇಶ್ ಶರ್ಮಾ ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮಗೆ ಬಂದಿರುವ ಎಲ್ಲಾ ಉಡುಗೊರೆಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ ಎಂದು ಶರ್ಮಾ ಅವರು ಹೇಳಿದ್ದಾರೆ.
ಮೋದಿ ಅವರಿಗೆ 1,900ಕ್ಕೂ ಹೆಚ್ಚು ವಸ್ತುಗಳು, ಸ್ಮರಣಿಕೆಗಳು ಉಡುಗೊರೆ ರೂಪದಲ್ಲಿ ಬಂದಿವೆ. ಇವುಗಳನ್ನು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್ (ಎನ್​ಜಿಎಂಎ)ನಲ್ಲಿ ಇರಿಸಲಾಗಿದೆ. 
ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಬಂದಿದ್ದ ಉಡುಗೊರೆಗಳನ್ನು 2015ರಲ್ಲಿ ಹರಾಜು ಹಾಕಲಾಗಿತ್ತು. ಇದರಿಂದ ಸಂಗ್ರಹವಾದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗಿತ್ತು. ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್​ಜಿಎಂಎ, ಪ್ರಧಾನಿಗೆ ಬಂದ ಉಡುಗೊರೆಗಳ ವಿಶೇಷ ಪ್ರದರ್ಶನವನ್ನು ಕಳೆದ ವರ್ಷ ಅಕ್ಟೋಬರ್​ನಲ್ಲಿ ಆಯೋಜಿಸಿತ್ತು.
SCROLL FOR NEXT