ದೇಶ

ನೋಟು ನಿಷೇಧದಿಂದ ಮನೆಗಳು ಯುವಜನತೆಯ ಕೈಗೆಟುಕುವಂತಾಯಿತು: ಪ್ರಧಾನಿ ಮೋದಿ

Srinivas Rao BV
ನವದೆಹಲಿ: ನೋಟು ನಿಷೇಧದಿಂದ, ಯುವಜನತೆಗೆ ಮನೆಗಳು ಕೈಗೆಟುವ ದರದಲ್ಲಿ ಲಭಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಗುಜರಾತ್ ನ ಸೂರತ್ ನ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರ ಜಾರಿಗೆ ತಂದ ನೋಟು ನಿಷೇಧದಿಂದಾಗಿರುವ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. "ನೋಟು ನಿಷೇಧದಿಂದ ಆದ ಪ್ರಯೋಜನವೇನು ಎಂದು ಕೇಳುತ್ತಾರೆ. ಇದನ್ನು ನೀವು ಯುವಜನತೆಯನ್ನು ಕೇಳಬೇಕು. ನೋಟು ನಿಷೇಧದಿಂದ ಅವರಿಗೆ ಮನೆಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಲು ಸಾಧ್ಯವಾಯಿತು. ನೋಟು ನಿಷೇಧಕ್ಕೂ ಮುನ್ನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಪ್ಪು ಹಣ ಇರುತ್ತಿತ್ತು. ಆದರೆ ನೋಟು ನಿಷೇಧ, ರೇರಾ ದಿಂದಾಗಿ ಅವೆಲ್ಲದಕ್ಕೂ ಕಡಿವಾಣ ಬಿತ್ತು ಎಂದು ಮೋದಿ ಹೇಳಿದ್ದಾರೆ. 
ನಮ್ಮ ಸರ್ಕಾರ ಈ ವರೆಗೂ ಮಾಡಿರುವ ಕೆಲಸಗಳನ್ನು ಮಾಡಬೇಕಾದರೆ ಬೇರೆ ಸರ್ಕಾರಗಳಿಗೆ 25 ವರ್ಷಗಳು ಬೇಕಾಗುತ್ತಿದ್ದವು ಎಂದೂ ಮೋದಿ ಹೇಳಿದ್ದಾರೆ.  ಇದೇ ವೇಳೆ ಉಡಾನ್ ಯೋಜನೆಯ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿ ನಾಗರಿಕ ವಿಮಾನಯಾನ ಸಚಿವಾಲಯವನ್ನೂ ಅಭಿನಂದಿಸಿದ್ದು, ಕೈಗೆಟುಕುವ ದರದಲ್ಲಿ ವಿಮಾನ ಸೌಲಭ್ಯ ಕಲ್ಪಿಸುವುದು ದೇಶದ ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಎಂದಿದ್ದಾರೆ.  ಯುಪಿಎ ಸರ್ಕಾರದ ಅವಧಿಯಲ್ಲಿ 25 ಲಕ್ಷ ಮನೆಗಳು ನಿರ್ಮಾಣವಾಗಿದ್ದರೆ, ತಮ್ಮ ಸರ್ಕಾರದ ಅವಧಿಯಲ್ಲಿ 1.30 ಕೋಟಿ ಮನೆಗಳು ನಿರ್ಮಾಣವಾಗಿವೆ. ಕಳೆದ 30 ವಷಗಳಿಂದ ಸಂಸತ್ ನಲ್ಲಿ ಅತಂತ್ರ ಫಲಿತಾಂಶ ಸಿಗುತ್ತಿತ್ತು. ಆದರೆ ಈಗ ಜನತೆ ಪೂರ್ಣ ಬಹುಮತ ನೀಡಿರುವುದರಿಂದ ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. 
SCROLL FOR NEXT