ದೇಶ

ಯುಪಿಎಸ್ ಸಿ ಪರೀಕ್ಷೆ ಬಗ್ಗೆ ಭಾಷಣ ಬಿಗಿಯುತಿದ್ದ ನಕಲಿ ಐಪಿಎಸ್ ಅಧಿಕಾರಿಯ ಬಂಧನ

Lingaraj Badiger
ಜೈಪುರ್: ಐಪಿಎಸ್ ಅಧಿಕಾರಿಯಂತೆ ಫೋಸ್ ನೀಡುತ್ತ, ಯುಪಿಎಸ್ ಸಿ ಹಾಗೂ ಐಐಟಿ ಪರೀಕ್ಷೆಗಳನ್ನು ಪಾಸ್ ಮಾಡುವ ಬಗ್ಗೆ ಭರ್ಜರಿ ಭಾಷಣ ಮಾಡುತ್ತಿದ್ದ ಅರ್ಧಕ್ಕೆ ಶಾಲೆ ಬಿಟ್ಟಿದ್ದ 20 ವರ್ಷದ ಯುವಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ತನ್ನ ಸ್ಪೂರ್ತಿದಾಯಕ ಭಾಷಣಗಳ ಮೂಲಕ ಸಾಮಾಜಿಕ ತಾಣದಲ್ಲಿ ಸ್ಟಾರ್ ಆಗಿದ್ದ ನಕಲಿ ಐಪಿಎಸ್ ಅಧಿಕಾರಿ ಅಭಯ್ ಮೀನಾರನ್ನು ವಿಶೇಷ ಕಾರ್ಯಾಚರಣೆ ತಂಡ(ಎಸ್ಒಜಿ) ಬಂಧಿಸಿದ್ದು, ಆರೋಪಿಯ ನಕಲಿ ಬಯೋಡೇಟಾ ಮತ್ತು ಭಾಷಣಕ್ಕೆ ಮರುಳಾಗಿ ರಾಜ್ಯದ ಹಲವು ಸಂಘಟನೆಗಳನ್ನು ಆತನನ್ನು ಸನ್ಮಾನಿಸಿವೆ.
ಯುಪಿಎಸ್‌ಸಿ ಪರೀಕ್ಷೆ ಪಾಸಾಗಲು ದಿನಕ್ಕೆ ಹಲವಾರು ಗಂಟೆ ಓದುತ್ತಿದ್ದೆ ಎಂದು ತನ್ನ ಭಾಷಣಗಳ ಮೂಲಕ ಯುವ ಜನಾಂಗವನ್ನು ನಂಬಿಸಿದ್ದ ಅಭಯ್ ಮೀನಾ ತನ್ನ ಪೊಲೀಸ್ ಕಾರ್ಡನ್ನು ತೋರಿಸಿದಾಗ ವ್ಯಕ್ತಿಯೊಬ್ಬರಿಗೆ ಈ ಬಗ್ಗೆ ಸಂಶಯ ಬಂದಿದೆ. ಕಾರಣ ಅದಲ್ಲಿ ಕ್ರೈಮ್ ಬ್ರಾಂಚ್ ಅನ್ನು 'ಬ್ರಾಂಚೆ' ಎಂದು ಕ್ಯಾಪಿಟಲ್ ಅನ್ನು 'ಕ್ಯಾಪಿಟೋಲ್' ಎಂದು ಬರೆಯಲಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಆರೋಪಿ ಬಳಿ ಇದ್ದ ಕಾರ್‌ಗೆ ಸರ್ಕಾರ ಸ್ಟಿಕ್ಕರ್ ಮತ್ತು ನಕಲಿ ಸ್ಟಾರ್‌‌ಗಳಿದ್ದವು. ಆತ ನಮ್ಮ ದಿಕ್ಕು ತಪ್ಪಿಸಲು ಪ್ರಯತ್ನಿಸಿದ. ಆದರೆ ಸಾಧ್ಯವಾಗಲಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಐಪಿಎಸ್ ಅಧಿಕಾರಿಯಾದೆ ಎಂದು ಜನರನ್ನು ಮರಳು ಮಾಡಿ, ಹಣ ಸಂಪಾದಿಸಲು ಯತ್ನಿಸುತ್ತಿದ್ದ ಎಂದುಹೆಚ್ಚುವರಿ ಎಸ್ಪಿ ಕರಣ್ ಶರ್ಮಾ ತಿಳಿಸಿದ್ದಾರೆ.
ಅಭಯ್ ಮೀನಾ ಸ್ಟಾರ್( ಪೊಲೀಸ್ ಸ್ಟಾರ್) ಗುರುತಿದ್ದ ಕಾರಿನಲ್ಲಿ ಓಡಾಡುತ್ತಿದ್ದ. ನಗರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತನಾಗುತ್ತಿದ್ದ. ನಿಜವಾದ ಪೊಲೀಸರಿಂದ ಸೆಲ್ಯೂಟ್ ಹೊಡೆಸಿಕೊಳ್ಳುವಷ್ಟು ಪ್ರಭಾವ ಬೆಳೆಸಿಕೊಂಡಿದ್ದ. ತನ್ನ ಲಿವ್ ಇನ್ ಸಂಗಾತಿಯೊಂದಿಗೆ ದುಬಾರಿ ಹೊಟೇಲ್‌ಗಳಲ್ಲಿ ತಂಗುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
SCROLL FOR NEXT