ದೇಶ

ಪಕ್ಷೇತರರು ಮೈತ್ರಿ ಸರ್ಕಾರದ ಜೋಡೆತ್ತುಗಳು - ಸಚಿವ ಹೆಚ್.ನಾಗೇಶ್

Nagaraja AB
ಬೆಂಗಳೂರು :  ಪಕ್ಷೇತರ ಶಾಸಕರಾಗಿರುವ ನಾನು ಮತ್ತು ಆರ್.ಶಂಕರ್ ಮೈತ್ರಿ ಸರ್ಕಾರಕ್ಕೆ ಜೋಡೆತ್ತುಗಳು ಇದ್ದಂತೆ. ಸರ್ಕಾರದ ಎಡಬಲದಲ್ಲಿ ನಿಂತು ನಾವು ಬೆಂಬಲ ನೀಡುತ್ತೇವೆ. ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ನೂತನ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಇನ್ನೂ ನಾಲ್ಕು ವರ್ಷ ಯಾವುದೇ ರೀತಿಯಲ್ಲಿಯೂ ಅಲುಗಾಡುವುದಿಲ್ಲ. ಕುಮಾರಸ್ವಾಮಿ ವ್ಯವಸ್ಥಿತವಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಒಳ್ಳೆಯ ಕಾರ್ಯಕ್ರಮಗಳು, ಯೋಜನೆಗಳನ್ನು ಹಾಕಿಕೊಂಡು ಸರ್ಕಾರವನ್ನು ಮುನ್ನಡೆಸುತ್ತೇವೆ  ಎಂದರು. 
ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರು ಎಂದು ಕರೆಯಿಸಿಕೊಳ್ಳುವವರು ಅತೃಪ್ತರಲ್ಲ. ಅವರು ಬೇಡಿಕೆ ಇಡುತ್ತಿರುವ ನಾಯಕರು. ನಾನು ಮತ್ತು ಶಂಕರ್ ಸುಮ್ಮನೆ ಕೂರುವುದಿಲ್ಲ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ ಎಂದು  ತಿಳಿಸಿದರು. 
ಆರ್.ಶಂಕರ್ ಅವರಿಗಾದರೂ ಒಂದು ಪಕ್ಷವಿದೆ. ನನಗೆ ಯಾವುದೇ ಪಕ್ಷವಿಲ್ಲ. ನಾನು ಸರ್ವಸ್ವತಂತ್ರ. ಕುಮಾರಸ್ವಾಮಿ ಸಂದರ್ಭ ನೋಡಿಕೊಂಡು ಬುದ್ಧಿವಂತಿಕೆ ಉಪಯೋಗಿಸಿ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ .ಸರ್ಕಾರದಲ್ಲಿ 34 ಸಚಿವ ಸ್ಥಾನಗಳು ಅಷ್ಟೆ ಇವೆ. 50-60 ಸ್ಥಾನಗಳು ಇದ್ದಿದ್ದರೆ ಬಹುಷಃ ಎಲ್ಲರನ್ನು ಸೇರಿಸಿಕೊಳ್ಳಬಹುದಿತ್ತೇನೋ ಎಂದು ವ್ಯಂಗ್ಯವಾಡಿದರು.
ಸರ್ಕಾರ ರಚನೆಯಾಗಿ ಒಂದು ವರ್ಷವಾಗಿದೆ. ಕೆಲವರು ಮಂತ್ರಿಗಳಾಗಿ 6 ತಿಂಗಳಾಗಿದೆ. ಹೀಗಾಗಿ ಬೇಗನೇ ಅವರನ್ನು ಸಂಪುಟದಿಂದ ಕೈಬಿಟ್ಟರೆ ಮುಂದೇನಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗೆಯೇ ಮಾಡಿ ಎಂದು ಕುಮಾರಸ್ವಾಮಿ ಅವರಿಗೆ ಸಲಹೆ ಕೊಡುವಷ್ಟು ದೊಡ್ಡವನಾಗಿಲ್ಲ. ನಾನು ಈಗಷ್ಟೇ ಮಂತ್ರಿಯಾಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಹೆಚ್.ನಾಗೇಶ್ ಉತ್ತರಿಸಿದರು.
SCROLL FOR NEXT