ದೇಶ

ಕಾಶ್ಮೀರ: ಶಾಲೆಗೆ ತಡವಾಗಿ ಬಂದ ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ವಿಡಿಯೋ ವೈರಲ್

Lingaraj Badiger
ಜಮ್ಮು: ಶಾಲೆಗೆ ಕೇವಲ 10 ನಿಮಿಷ ತಡವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ಮೊದಲು ಬಗ್ಗಿ ಮಂಡಿಯಿಂದ ಕೈಹಾಕಿ ಕಿವಿ ಹಿಡಿಯುವ ಶಿಕ್ಷೆ ನೀಡಿದ್ದ ಶಿಕ್ಷಕ, ಬಳಿಕ ಮನಬಂದಂತೆ ಥಳಿಸಿದ್ದಾರೆ. ಕ್ರೂರ ಶಿಕ್ಷಕ ನಿರ್ದಯಿಯಾಗಿ ಮಕ್ಕಳಿಗೆ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಕ್ಕಳನ್ನು ಥಳಿಸಿದ ವಿಡಿಯೋ ತೋರಿಸಿದ ನಂತರ ಶಿಕ್ಷಕ ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ತನಿಖೆಗೆ ನಾವು ತನಿಖೆ ಆದೇಶಿಸಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಶಿಕ್ಷಕನಿಂದ ಕಠಿಣ ಶಿಕ್ಷೆಗೆ ಗುರಿಯಾಗಿರುವ ಮಕ್ಕಳು ಗುಜ್ಜರ್ ಮತ್ತು ಬಕ್ಕರ್ವಾಲ್ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಾಸ್ಟೆಲ್ ನಲ್ಲಿ ವಾಸಿಸುವ ಮಕ್ಕಳು ತಮ್ಮ ತರಗತಿಗೆ ಹತ್ತು ನಿಮಿಷ ತಡವಾಗಿ ಬಂದಿದ್ದಾರೆ. ಮಕ್ಕಳನ್ನು ಮಂಡಿಯೂರಿ ಕಿವಿ ಹಿಡಿಯುವಂತೆ ಶಿಕ್ಷಿಸಿದ್ದಾನೆ. ಬಹಳ ಸಮಯ ಶಿಕ್ಷೆ ಅನುಭವಿಸಿದ ಮಕ್ಕಳು ಶಿಕ್ಷಕರ ಬಳಿ ಮಾತನಾಡಲು ಮುಂದಾದಾಗ, ಕ್ರೂರವಾಗಿ ವರ್ತಿಸಿದ ಶಿಕ್ಷಕ ಮಕ್ಕಳ ಮೈಮೇಲೆ ಬರೆ ಬರುವ ಮಟ್ಟಿಗೆ ಹೊಡೆದಿದ್ದಾರೆ.
SCROLL FOR NEXT