ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ರನ್ನು ಶಾಂತಿಯ ಸೂಚಕವಾಗಿ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ ಮಾಡಿದ್ದಾರೆ. ಆದರೆ ನಿಜಕ್ಕೂ ಇಮ್ರಾನ್ ಶಾಂತಿಯ ಸೂಚಕವಾಗಿ ಬಿಡುಗಡೆ ಮಾಡುತ್ತಿದ್ದಾರೆಯೋ ಅಥವಾ ಮತ್ತೆ ಜಾಗತಿಕ ಮಟ್ಟದಲ್ಲಿ ಪಾಕ್ ಏಕಾಂಗಿಯಾಗುವ ಭಯದಿಂದ ಈ ನಿರ್ಧಾರ ಕೈಗೊಂಡರೋ..
ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಶುಕ್ರವಾರ ಬಿಡುಗಡೆಯಾಗಲಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ದೇಶದೆಲ್ಲೆಡೆ ಹರ್ಷದ, ಹಬ್ಬದ ವಾತಾವರಣ ಮನೆಮಾಡಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮಾತುಕತೆಯಿಲ್ಲದೆ, ಯಾವುದೇ ರಾಜಿ ಅಥವಾ ಒಪ್ಪಂದ ಮಾಡಿಕೊಳ್ಳದೆ, ಯಾವುದೇ ಯುದ್ಧ ಸೂಚನೆಯೂ ಇಲ್ಲದೆ ಪಾಕಿಸ್ತಾನ ಬಿಡುಗಡೆಗೆ ಒಪ್ಪಿಕೊಂಡಿರುವುದು ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.
ಯುದ್ಧನ್ಮೋದದಲ್ಲಿದ್ದ ಪಾಕಿಸ್ತಾನ ಯಾವುದೇ ಷರತ್ತಿಲ್ಲದೇ ಭಾರತೀಯ ಪೈಲಟ್ ಅಭಿನಂದನ್ ರನ್ನು ಬಿಡುಗಡೆ ಮಾಡಲು ಒಪ್ಪಿದೆ. ಆದರೆ ಪಾಕಿಸ್ತಾನ ಈ ನಿರ್ಧಾರದ ಹಿಂದಿನ ಕೆಲ ನಿಗೂಢ ಕಾರಣಗಳು ಇಲ್ಲಿವೆ.
1. ಭಾರತದ ವಿರುದ್ಧ ಪಾಕಿಸ್ತಾನ ಆಕ್ರೋಶಗೊಳ್ಳಲು ಯಾವುದೇ ಕಾರಣಗಳಿಲ್ಲ. ಮೊದಲಿನಿಂದಲೂ ಪಾಕಿಸ್ತಾನ ತಾನು ಉಗ್ರರಿಗೆ ನೆರವು ನೀಡುತ್ತಿಲ್ಲ ಎಂದು ಹೇಳಿಕೊಂಡು ಬಂದಿದೆ. ಆದರೆ ಈಗ ಭಾರತ ದಾಳಿ ಮಾಡಿರುವುದು ಭಯೋತ್ಪಾದಕರ ನೆಲೆಗಳ ಮೇಲೆಯೇ ಹೊರತು ಪಾಕಿಸ್ತಾನ ಸೇನೆ ಕ್ಯಾಂಪ್ ಗಳ ಮೇಲೆ ಅಲ್ಲ. ಅನಗತ್ಯವಾಗಿ ಪಾಕಿಸ್ತಾನ ಭಾರತದ ಮೇಲೆ ಸೇಡು ತೀರಿಸಿಕೊಳ್ಳುವ ಭರದಲ್ಲಿ ತನ್ನ ಉಗ್ರರ ಮೇಲಿನ ಪ್ರೇಮವನ್ನು ಜಾಗತಿಕ ಮಟ್ಟದಲ್ಲಿ ಜಗಜ್ಜಾಹಿರು ಮಾಡಿಕೊಂಡಿದೆ. ಹೀಗಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಆ ದೇಶದ ಆಪ್ತ ರಾಷ್ಟ್ರ ಚೀನಾ ಸೇರಿದಂತೆ ವಿಶ್ವದ ಯಾವುದೇ ರಾಷ್ಟ್ರ ಬೆಂಬಲಿಸುತ್ತಿಲ್ಲದಿರುವುದರಿಂದ ಪಾಕಿಸ್ತಾನ ಭಾರೀ ಒತ್ತಡದಲ್ಲಿತ್ತು.
2. ಭಾರತ ಏರ್ ಸ್ಟ್ರೈಕ್ ಮಾಡಿದ್ದು ಭಯೋತ್ಪಾದನಾ ನೆಲೆಗಳ ಮೇಲೆ, ಪಾಕಿಸ್ತಾನದ ಸೇನೆಯ ಮೇಲೆ ಅಲ್ಲ ಎಂಬುದನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸುತ್ತಲೇ ಇತ್ತು. ಅಲ್ಲದೆ ಇದೊಂದು ಮಿಲಿಟರಿಯೇತರ ದಾಳಿ ಎಂದು ದಾಳಿ ಬಳಿಕ ಜಗತ್ತಿನ ಪ್ರಮುಖ ದೇಶಗಳಿಗೆ ಮಾಹಿತಿ ನೀಡಿತ್ತು. ಅಲ್ಲದೆ ಈ ಕುರಿತು ರಾಯಭಾರಿ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿತ್ತು.
3. ಈಗಾಗಲೇ ಅರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಆರ್ಥಿಕ ಸಂಕಷ್ಟದಿಂದ ಪಾರಾಗಲು ನಾನಾ ಹರಸಾಹಸ ಮಾಡುತ್ತಿದೆ. ಇತ್ತೀಚೆಗಷ್ಟೇ ಸೌದಿ ದೊರೆ ಪಾಕ್ ಗೆ 20 ಬಿಲಿಯನ್ ಡಾಲರ್ ನೆರವು ನೀಡಿದ್ದರು. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಆರ್ಥಿಕವಾಗಿ ಜರ್ಝರಿತವಾಗಿರುವ ಪಾಕಿಸ್ತಾನ ಮತ್ತೊಂದು ಯುದ್ಧ ಎದುರಿಸುವ ಸಾಮರ್ಥ್ಯ ಹೊಂದಿಲ್ಲ. ಆರ್ಥಿಕವಾಗಿ ಮತ್ತು ನೈತಿಕವಾಗಿ ನಿತ್ರಾಣವಾಗಿರುವ ಪಾಕಿಸ್ತಾನಕ್ಕೆ ಸಂಧಾನ ಬಿಟ್ಟರೆ ಬೇರೆ ದಾರಿ ಇರಲಿಲ್ಲ.
4. ಇನ್ನು ಭಾರತೀಯ ವಾಯುಸೇನೆ ಯೋಧ ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ, ಆದರೆ ಮಾತುಕತೆಗೆ ಸಿದ್ಧರಾಗಿ ಎಂದ ಪಾಕಿಸ್ತಾನಕ್ಕೆ ಭಾರತ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಬದಲಿಗೆ, ಅಭಿನಂದನ್ ಅವರನ್ನು ಯಾವುದೇ ಷರತ್ತು ಇಲ್ಲದೆ, ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡದೆ ಬಿಡುಗಡೆ ಮಾಡಬೇಕೆಂಬ ಆಗ್ರಹ ಇಟ್ಟಿತ್ತು. ಅಲ್ಲದೆ ಒಂದು ವೇಳೆ ಅಭಿನಂದನ್ ರನ್ನು ಬಿಡುಗಡೆ ಮಾಡದೇ ಇದ್ದರೆ ಕಠಿಣ ಕ್ರಮ ಜರುಗಿಸುವುದಾಗಿಯೂ ಭಾರತ (ಪರೋಕ್ಷವಾಗಿ ಮಿಲಿಟರಿ ಕಾರ್ಯಾಚರಣೆ) ಎಚ್ಚರಿಕೆ ನೀಡಿತ್ತು.
5. ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡ ಅಭಿನಂದನ್ ಅವರ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಜಿನೀವಾ ಒಪ್ಪಂದವನ್ನು ಉಲ್ಲಂಘನೆ ಮಾಡಿತ್ತು. ಈ ಸಂಬಂಧ ಭಾರತ ಕೂಡ ಪಾಕಿಸ್ತಾನವನ್ನು ಪ್ರಶ್ನಿಸಿದ್ದು ಮಾತ್ರವಲ್ಲದೇ ಇದೇ ವಿಚಾರವಾಗಿ ವಿವಿಧ ದೇಶಗಳಲ್ಲಿರುವ ತನ್ನ ರಾಯಭಾರಿಗಳ ಮೂಲಕ ರಷ್ಯಾ, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳ ಸರ್ಕಾರದ ಗಮನಕ್ಕೆ ಬರುವಂತೆ ಮಾಡಿತ್ತು. ಇದು ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿತ್ತು.
6. ವಶಕ್ಕೆ ಪಡೆದಿದ್ದ ಅಭಿನಂದನ್ ಅವರನ್ನು ಪಾಕಿಸ್ತಾನ ಯುದ್ಧಕೈದಿ ಎಂದು ಬಿಂಬಿಸಿದ್ದು ಮತ್ತು ಅವರ ಮೇಲೆ ರಕ್ತ ಹರಿಯುವಂತೆ ಹಲ್ಲೆ ಮಾಡಿದ್ದು ಜಿನೀವಾ ಒಪ್ಪಂದದ ಮತ್ತೊಂದು ಉಲ್ಲಂಘನೆಯಾಗಿತ್ತು. ಆದರೆ ಇಲ್ಲಿ ಯಾವುದೇ ರೀತಿಯ ಯುದ್ಧ ಅಥವಾ ಯುದ್ಧ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ. ವಾಯುಗಡಿ ನಿಯಮ ಉಲ್ಲಂಘಿಸಿ ಭಾರತದ ಗಡಿಯೊಳಗೆ ನುಗ್ಗಿದ್ದ ಪಾಕಿಸ್ತಾನದ ಜೆಟ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಾಗ ಸಂಭವಿಸಿದ ಕಾಳಗದಲ್ಲಿ ಅಭಿನಂದನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು. ಹೀಗಾಗಿ ಅವರನ್ನು ಯುದ್ಧ ಕೈದಿ ಎಂದು ಬಿಂಬಿಸುವಂತಿರಲಿಲ್ಲ.
7. ಈ ಹಿಂದೆ ಭಾರತೀಯ ವಾಯು ಸೇನೆ ಏರ್ ಸ್ಟ್ರೈಕ್ ಬಳಿಕ ಇಮ್ರಾನ್ ಖಾನ್ ಸರ್ಕಾರ ಪಾಕಿಸ್ತಾನದ ವಿಪಕ್ಷಗಳಿಂದ ಭಾರಿ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ಇಮ್ರಾನ್ ಖಾನ್ ಸರ್ಕಾರದ ಪಾಕಿಸ್ತಾನ ಸಂಸತ್ತಿನಲ್ಲೂ ಆಗ್ರಹ ಕೇಳಿ ಬಂದಿತ್ತು. ಜಾಗತಿಕ ಮಟ್ಟದಲ್ಲೂ ಈ ಪ್ರಕರಣ ಪಾಕಿಸ್ತಾನ ಮಾನ ಹರಾಜು ಹಾಕಿತ್ತು. ಇದೇ ಕಾರಣಕ್ಕೆ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಮೂಲಕ ಎರಡೂ ದೇಶಗಳ ನಡುವೆ ಶಾಂತಿಗೆ ನಾವು ಬದ್ಧರಾಗಿದ್ದೇವೆ ಎಂದು ತೋರಿಸಿ ಕಳೆದು ಹೋದ ಗೌರವ ಮರಳಿ ಪಡೆಯುವುದು ಇಮ್ರಾನ್ ಖಾನ್ ಸರ್ಕಾರದ ನಡೆಯಾಗಿದೆ.
8.ಇಡೀ ಪ್ರಕರಣದಲ್ಲಿ ಗುಪ್ತಗಾಮಿನಿಯಿಂತೆ ಪ್ರಮುಖ ಪಾತ್ರ ವಹಿಸಿದ್ದು ಭಾರತದ ವಿದೇಶಾಂಗ ಇಲಾಖೆ. ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ನೇತೃತ್ವ ವಿದೇಶಾಂಗ ಇಲಾಖೆ ತನ್ನ ರಾಯಭಾರಿಗಳ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರುವಲ್ಲಿ ಶೇ.100ರಷ್ಟು ಯಶಸ್ವಿಯಾಗಿದ್ದರು. ಇದೇ ಕಾರಣಕ್ಕೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆಯಲ್ಲಿ ಜೈಶ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರುವ ಪ್ರಸ್ತಾಪ ಮಂಡಿಸುವ ನಿರ್ಧಾರ ಕೈಗೊಂಡರು. ಅಲ್ಲದೆ ನಾಳೆಯಿಂದ ಅಬುದಾಬಿಯಲ್ಲಿ ಜಾಗತಿಕ ಮಟ್ಟದ ಇಸ್ಲಾಮಿಕ್ ಕಾನ್ಫರೆನ್ಸ್ ನಡೆಯಲಿದ್ದು ಭಾರತದ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರೂ ಕೂಡ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಸುಷ್ಮಾ ಸ್ವರಾಜ್ ಖಂಡಿತಾ ಜಾಗತಿಕ ಭಯೋತ್ಪಾದನೆ ಕುರಿತು ಮಾತನಾಡಲಿದ್ದು, ಈ ಹಂತದಲ್ಲಿ ಮತ್ತೆ ಪಾಕಿಸ್ತಾನ ಆಗಬಹುದಾದ ಮುಜುಗರ ತಪ್ಪಿಸಿಕೊಳ್ಳಲು ಪಾಕಿಸ್ತಾನ ಪೈಲಟ್ ಅಭಿನಂದನ್ ರನ್ನು ನಾಳೆಯೇ ಬಿಡುಗಡೆ ಮಾಡಲು ನಿರ್ಧರಿಸಿರಬಹುದು ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos