ನವದೆಹಲಿ: ಗಡಿಯಾಚೆಗಿನ ಏರ್ ಸ್ಟ್ರೈಕ್ ಬಳಿಕ ಇದೀಗ ಗಡಿಯೊಳಗಿನ ಉಗ್ರರ ಮತ್ತು ಅವರಿಗೆ ನೆರವು ನೀಡುತ್ತಿವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಜಮ್ಮು ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ಸಂಘಟನೆಯನ್ನು ನಿಷೇಧ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿರುವ ಮತ್ತು ಯುವಕರಲ್ಲಿ ದೇಶ ವಿರೋಧಿ ಭಾವನೆ ಬಿತ್ತುತ್ತಿರುವ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಜಮಾತ್-ಇ-ಇಸ್ಲಾಮಿ (ಜೆಇಐ) ಸಂಘಟನೆಯನ್ನು ಇಂದು ನಿಷೇಧ ಮಾಡಿದೆ. ಕಾನೂನು ಬಾಹಿರ ಚಟುವಟಿಕೆ ಕಾಯ್ದೆ 1967ರ ಸೆಕ್ಷನ್ 3ರ ಅಡಿಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಅಲ್ಲದೆ ಮುಂದಿನ ಐದು ವರ್ಷಗಳ ಕಾಲ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ನಿಷೇಧಿಸಲಾಗಿದ್ದು, ಸಂಘಟನೆಯ ಯಾವುದೇ ರೀತಿಯ ಬಹಿರಂಗ ಸಭೆ ಕಾರ್ಯಕ್ರಮ ಕಾನೂನು ಬಾಹಿರ ಎಂದು ಹೇಳಿದೆ. 1953ರಲ್ಲಿ ಜನ್ಮ ತಾಳಿದ್ದ ಜೆಇಎಂ ಸಂಘಟನೆ ಕಾಶ್ಮೀರದಲ್ಲಿ ಪ್ರಮುಖ ಪ್ರತ್ಯೇಕತಾ ವಾದಿ ಸಂಘಟನೆಯಾಗಿ ಗುರುತಿಸಿಕೊಂಡಿತ್ತು. 1987ರವರೆಗೂ ಈ ಸಂಘಟನೆ ಕಾಶ್ಮೀರದ ಎಲ್ಲ ರೀತಿಯ ಚುನಾವಣೆಗಳಲ್ಲಿ ಸ್ಪರ್ಧೆ ಕೂಡ ಮಾಡುತ್ತಿತ್ತು.
ಕಾಶ್ಮೀರದ ಹುರಿಯತ್ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿ ಕೂಡ ಈ ಹಿಂದೆ ಇದೇ ಸಂಘಟನೆ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕೂಡ ಸಾಧಿಸಿದ್ದರು. 1989ರಲ್ಲಿ ಮೊದಲ ಬಾರಿಗೆ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದ ಈ ಜೆಇಎಂ ಸಂಘಟನೆ ಚುನಾವಣೆಗಳಿಂದ ದೂರ ಉಳಿದಿತ್ತು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತ್ಯೇಕತಾವಾದಿಗಳ ಪರ ಕಣಿವೆ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿತ್ತು.