ಅಬುದಾಬಿ: ಸೌದಿಯಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅವಿರೋಧ ನಿರ್ಣಯ ಕೈಗೊಂಡ ಬೆನ್ನಲ್ಲೇ ತಿರುಗೇಟು ನೀಡಿರುವ ಭಾರತ ಕಾಶ್ಮೀರ ವಿಚಾರ ಸಂಪೂರ್ಣ ಆಂತರಿಕವಿಚಾರವಾಗಿದ್ದು, ಇತರರ ಮಧ್ಯಸ್ಥಿಕೆ ಬೇಡ ಎಂದು ಹೇಳಿದೆ.
ಕಾಶ್ಮೀರದಲ್ಲಿನ ಆಂತರಿಕ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಒಐಸಿಯಲ್ಲಿ ಕಾಶ್ಮೀರದಲ್ಲಿನ ಅಕ್ರಮ ಬಂಧನಗಳು ಮತ್ತು ಕಣ್ಮರೆ ವಿರೋಧಿಸಿ ನಿನ್ನೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದನ್ನು ವಿರೋಧಿಸಿರುವ ಭಾರತ ಕಾಶ್ಮೀರ ಸಂಪೂರ್ಣ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಇತರರ ಮಧ್ಯಸ್ಥಿಕೆ ಬೇಡ ಎಂದು ತಿರುಗೇಟು ನೀಡಿದೆ.
ಅಂತೆಯೇ ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿದ್ದು, ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವು ಸಡಿಲಗೊಳಿಸುವುದು ಸಾಧ್ಯವಿಲ್ಲ. ಅಂತೆಯೇ ಇದರಲ್ಲಿ ಇತರೆ ರಾಷ್ಟ್ರಗಳ ಮಧ್ಯಪ್ರವೇಶವನ್ನೂ ಭಾರತ ವಿರೋಧಿಸುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟವಾಗಿ ಹೇಳಿದ್ದಾರೆ.
ಅಂತೆಯೇ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಸುಷ್ಮಾ, ಕಾಶ್ಮೀರ ರಾಜ್ಯದ ರಕ್ಷಣೆಯಾಗಬೇಕು ಎಂದರೆ ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುತ್ತಿರುವ ರಾಷ್ಟ್ರಗಳನ್ನು ಇದರಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಅಂತೆಯೇ ಉಗ್ರರಿಗೆ ಆ ರಾಷ್ಟ್ರಗಳು ನೀಡುತ್ತಿರುವ ನೆರವು ತಡೆ ಹಿಡಿಯಬೇಕು ಎಂದು ಅಗ್ರಹಿಸಿದರು.