ಮತದಾರರನ್ನು ಮತದಾನ ಮಾಡಲು ಉತ್ತೇಜಿಸುವಂತೆ ರಾಹುಲ್ ಗಾಂಧಿ, ವಿಪಕ್ಷ ನಾಯಕರಿಗೆ ಮೋದಿ ಕರೆ
2019 ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಮತದಾರರನ್ನು ಉತ್ತೇಜಿಸಲು ರಾಹುಲ್ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಮೋದಿ ಒತ್ತಾಯಿಸಿದ್ದಾರೆ.
ಟ್ವಿಟರ್ ನಲ್ಲಿ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಶರದ್ ಪವಾರ್, ಮಾಯಾವತಿ, ಅಖಿಲೇಶ್ ಯಾದವ್ ಸೇರಿದಂತೆ ಎಲ್ಲಾ ವಿಪಕ್ಷಗಳ ನಾಯಕರನ್ನು ಟ್ಯಾಗ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮತದಾರರನ್ನು ಉತ್ತೇಜಿಸುವಂತೆ ಒತ್ತಾಯಿಸಿದ್ದಾರೆ. "ಮತದಾನದ ಪ್ರಮಾಣ ಹೆಚ್ಚಿದಷ್ಟೂ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಕ್ರೀಡಾಪಟುಗಳಾದ ಪಿವಿ ಸಿಂಧು, ಸೈನಾ ನೆಹ್ವಾಲ್, ಎಸ್ ಕಿದಂಬಿ, ನಟರಾದ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಉದ್ಯಮಿ ರತನ್ ಟಾಟಾ, ಆನಂದ್ ಮಹೀಂದ್ರಾ ಅವರಿಗೂ ಮತದಾರರನ್ನು ಮತದಾನ ಮಾಡುವಂತೆ ಉತ್ತೇಜಿಸಲು ಮೋದಿ ಮನವಿ ಮಾಡಿದ್ದಾರೆ.