ಕಡಪ: ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಕೆಲವು ವರ್ಷಗಳ ಹಿಂದೆ ತಮ್ಮನ್ನು ಭೇಟಿಯಾಗಿ, ಅವರನ್ನು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲು ಹೈಕಮಾಂಡ್‌ಗೆ 1500 ಕೋಟಿ ರೂ. ನೀಡುವ ಪ್ರಸ್ತಾಪ ಮುಂದಿಟ್ಟಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಫಾರೂಕ್ ಅಬ್ದುಲ್ಲಾ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಕಡಪದಲ್ಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಜಗನ್ ಮೋಹನ್ ರೆಡ್ಡಿ ಕೆಲವು ವರ್ಷಗಳ ಹಿಂದೆ ತಮ್ಮನ್ನು ಭೇಟಿಯಾಗಿ, ಅವರನ್ನು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲು ಹೈಕಮಾಂಡ್‌ಗೆ 1500 ಕೋಟಿ ರೂ. ನೀಡುವ ಪ್ರಸ್ತಾಪ ಮುಂದಿಟ್ಟಿದ್ದರು. ಇಷ್ಟೊಂದು ಹಣ ಎಲ್ಲಿಂದ ಅವರಿಗೆ ಸಿಕ್ಕಿದೆ ಎಂದು ಆಶ್ಚರ್ಯವಾಯಿತು. ಒಂದು ವೇಳೆ ಜನರು ಅವರನ್ನು ಆಯ್ಕೆ ಮಾಡಿದರೆ, ರಾಜ್ಯದ ಪರಿಸ್ಥಿತಿ ಹದಗೆಡುತ್ತಿತ್ತು ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲದಂತಾಗಿದೆ. ಜಗನ್ ಮೋಹನ್ ರೆಡ್ಡಿಯವರಿಗೆ ಮತ ಹಾಕಿದರೆ ಅದು ನರೇಂದ್ರ ಮೋದಿ ಅವರಿಗೆ ಮತ ಹಾಕಿದಂತೆ. ಪೊಲವರಮ್ ಯೋಜನೆಯನ್ನು ಮತ್ತು ಹಿಂದುಳಿದ ರಾಯಲಸೀಮಾ ಪ್ರದೇಶಕ್ಕೆ ನೀರು ಹರಿಸುವುದನ್ನು ವಿರೋಧಿಸುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಜಗನ್ ರೆಡ್ಡಿ ಹೇಗೆ ಬೆಂಬಲ ನೀಡುತ್ತಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದರು.
ಚುನಾವಣಾ ಲಾಭಕ್ಕಾಗಿ ಸರ್ಜಿಕಲ್ ಸ್ಟ್ರೈಕ್, ರಾಮಮಂದಿರ ಮುಂತಾದ ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸುತ್ತಿದೆ. ದೇಶ ತನ್ನ ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಬೇಕು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿಗಾಗಿ ಉಪ ಯೋಜನೆಯನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ. ಬಿಜೆಪಿಯೇತರ ಎಲ್ಲಾ ಪಕ್ಷಗಳು ತೆಲುಗು ದೇಶಂ ಪಕ್ಷಕ್ಕೆ ಬೆಂಬಲ ನೀಡಬೇಕು.ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸೋನಿಯಾ ಗಾಂಧಿಯವರು ಭರವಸೆ ನೀಡಿದ್ದಾರೆ ಎಂದು ಅಬ್ದುಲ್ಲಾ ತಿಳಿಸಿದರು.
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮಾತನಾಡಿ, ಟಿಡಿಪಿ ಸರ್ಕಾರ ಮುಸ್ಲಿಮರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ದುಲ್ಹನ್ ಯೋಜನೆಯಡಿ ನೀಡುತ್ತಿರುವ 50 ಸಾವಿರ ರೂ.ಯನ್ನು ಒಂದು ಲಕ್ಷಕ್ಕೆ ಹೆಚ್ಚಿಸಲಾಗುವುದು. ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆಯುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅನುದಾನವನ್ನು 10 ಲಕ್ಷದಿಂದ 25 ಲಕ್ಷ ರೂ.ಗೆ ಏರಿಸಲಾಗುವುದು. ಕರ್ನೂಲ್ ಮತ್ತು ಅಮರಾವತಿಯಲ್ಲಿ ಹಜ್ ಹೌಸ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಮಸೀದಿಯ ಇಮಾಮ್‌ಗಳಿಗೆ ನೀಡುತ್ತಿರುವ ಗೌರವ ಧನವನ್ನು 5000 ರೂ.ಯಿಂದ 10 ಸಾವಿರಕ್ಕೆ, ಮೌಜಮ್‌ಗಳಿಗೆ 3000 ರೂ.ಗೆ 5000 ರೂ.ಗೆ ಏರಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿ, ಎಲ್ಲಾ ಇಲಾಖೆಗಳಿಗೂ ಉರ್ದು ಅಧಿಕಾರಿಗಳನ್ನು ನೇಮಿಸಲಾಗುವುದು. ಕಡಪದ ಅಲ್ಮಾಸ್‌ಪೇಟೆ ಕೇಂದ್ರವನ್ನು ಅಭಿವೃದ್ಧಿಪಡಿಸಿ ಟಿಪ್ಪು ಸುಲ್ತಾನ್ ಚೌರಸ್ತಾ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos