ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್
ವಿಶ್ವಸಂಸ್ಥೆ: ಪಾಕಿಸ್ತಾನ ಭಯೋತ್ಪಾದಕರ ಪರವಾದಿಯಾಗಿದ್ದು, ಮುಂದೆಯೂ ಕೂಡ ಉಗ್ರರಿಗೆ ಆ ದೇಶದ ಸರ್ಕಾರದ ಆರ್ಥಿಕ ಮತ್ತು ಬಾಹ್ಯ ನೆರವು ಮುಂದುವರೆಯುತ್ತಿರುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಭಯೋತ್ಪಾದಕರಿಗೆ ಹಣ ಪೂರೈಕೆಯಾಗುವುದನ್ನು ತಡೆಯುವ ‘ಉಗ್ರ ಹಣಕಾಸು ನಿಗ್ರಹ’ ನಿರ್ಣಯವನ್ನು ಎಲ್ಲ ಸದಸ್ಯ ರಾಷ್ಟ್ರಗಳು ಕೈಗೊಳ್ಳಬೇಕೆಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನೀಡಿರುವ ಕರೆಯನ್ನು ಭಾರತ ಸ್ವಾಗತಿಸಿದೆ.
ಇದೇ ವೇಳೆ ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತ ರವಾನೆ ಮಾಡಿದ್ದ ಡಾಸಿಯರ್ ಹೊರತಾಗಿಯೂ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿರುವ ಪಾಕಿಸ್ತಾನದ ನಡೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತ ಕಿಡಿ ಕಾರಿದೆ. ಈ ಕುರಿತು ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತೀವ್ರ ಕಿಡಿಕಾರಿದರು. ಈ ವೇಳೆ ಪಾಕಿಸ್ತಾನ ಭಯೋತ್ಪಾದಕರ ವಾದಿಯಾಗಿದ್ದು, ಉಗ್ರರಿಗೆ ನೆರವಾಗುವುದನ್ನು ಆ ದೇಶ ಭವಿಷ್ಯದಲ್ಲೂ ಮುಂದುವರೆಸುತ್ತದೆ. ಅಲ್ಲದೆ ಉಗ್ರರ ಕೃತ್ಯಗಳಿಗೆ ತಾನು ಸಮಜಾಯಿಷಿ ನೀಡುತ್ತಲೇ ಇರುತ್ತದೆ. ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ವಿಶ್ವ ಸಮುದಾಯದ ಒತ್ತಡಕ್ಕೆ ಅದು ಬೆಲೆ ನೀಡುವುದಿಲ್ಲ ಎಂದು ತೀವ್ರ ಟೀಕಾ ಪ್ರಹಾರ ನಡೆಸಿದರು.
'ಭಯೋತ್ಪಾದಕರಿಗೆ ಹಣ ಒದಗದಂತೆ ಮಾಡಲು ಉಗ್ರ ಹಣಕಾಸು ನಿಗ್ರಹ ನಿರ್ಣಯವನ್ನು ಎಲ್ಲ ಸದಸ್ಯ ರಾಷ್ಟ್ರಗಳು ಕೈಗೊಳ್ಳಬೇಕೆಂಬ ವಿಶ್ವಸಂಸ್ಥೆಯ ಕರೆಯನ್ನು ನಾವು ಸ್ವಾಗತಿಸುತ್ತೇವೆ. ಉಗ್ರ ಹಣಕಾಸು ನಿಗ್ರಹ ಕಾರ್ಯ ಪಡೆ ಅತ್ಯಂತ ಮುಖ್ಯ ಪಾತ್ರ ವಹಿಸುವಲ್ಲಿ ಈ ಠರಾವು ನಿರ್ಣಾಯಕವಾಗಲಿದೆ. ವಿಶ್ವಸಂಸ್ಥೆಯ ನಿರ್ಣಯದ ಯಶಸ್ಸಿಗೆ ಅದರ ಅನುಷ್ಠಾನ ಅತೀ ಮುಖ್ಯವಾಗಿದೆ ಎಂದು ಅಕ್ಬರುದ್ದೀನ್ ಹೇಳಿದ್ದಾರೆ.
ಅಂತೆಯೇ ವಿಶ್ವಸಮುದಾಯದ ನಿರಂತರ ಪ್ರಯತ್ನದ ಹೊರತಾಗಿಯೂ ಉಗ್ರ ಸಂಘಟನೆಗಳಿಗೆ ನಿರಂತರವಾಗಿ ಆರ್ಥಿಕ ನೆರವು ಹರಿಯುತ್ತಿದೆ, ಅಲ್ಲದೆ ಉಗ್ರರಿಗೆ ಶಸ್ತ್ರಾಸ್ತ್ರಗಳ ಪೂರೈಕೆಯೂ ನಿರಂತರವಾಗಿದೆ. ಇದು ನಿಜಕ್ಕೂ ಅತ್ಯಂತ ಕಳವಳಕಾರಿಯಾದ ವಿಚಾರವಾಗಿದೆ. ಭಯೋತ್ಪಾದಕರಿಗೆ ನೆರವು ನೀಡುತ್ತಿರುವ ಮೂಲಗಳನ್ನು ಮೊದಲು ನಿಗ್ರಹಿಸಬೇಕು ಎಂದು ಹೇಳಿದರು.
1988ರ ನಿರ್ಬಂಧ ಮತ್ತು 1267ರ ಅಡಿಯಲ್ಲಿ ಅಲ್ ಖೈದಾ ವಿರುದ್ಧ ವಿಶ್ವಸಂಸ್ಥೆ ಕೈಗೊಂಡಿದ್ದ ನಿರ್ಬಂಧಗಳನ್ನು ಉದಾಹರಣೆ ನೀಡಿದ ಅಕ್ಬರುದ್ದೀನ್ ಅವರು, ಇದೇ ರೀತಿಯ ನಿರ್ಬಂಧಗಳನ್ನು ಜೈಶ್ ಇ ಮೊಹಮದ್, ಜಮಾತ್ ಉದ್ ದವಾ, ಫಲಾಹ್ ಇ ಇನ್ಸಾನಿಯತ್, ಲಷ್ಕರ್ ಇ ತೊಯ್ಬಾ, ಹಖ್ಖಾನಿ ನೆಟ್ವರ್ಕ್ ವಿರುದ್ಧ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos