ದೇಶ

ಫೊನಿ ಆರ್ಭಟ: ಒಡಿಶಾದಲ್ಲಿ 220 ರೈಲುಗಳು ರದ್ದು, ವಿಮಾನ ಸೇವೆ ಸ್ಥಗಿತ

Srinivasamurthy VN
ಭುವನೇಶ್ವರ: ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಫೊನಿ ಚಂಡಮಾರುತ ಪರಿಣಾಮದಿಂದಾಗಿ ಒಡಿಶಾದಲ್ಲಿ ಈ ವರೆಗೂ 220ಕ್ಕೂ ಅಧಿಕ ರೈಲುಗಳ ಸೇವೆ ಸ್ಥಗಿತವಾಗಿದ್ದು, ಎಲ್ಲ ರೀತಿಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಂಡಮಾರುತ ಪ್ರಭಾವದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಕಳೆದ ಎರಡು ದಿನಗಳಿಂದ ಒಡಿಶಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳದ ಮಾರ್ಗಗಳಲ್ಲಿ ಸಂಚರಿಸುವ 89 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಹಲವು ರೈಲುಗಳ ಮಾರ್ಗ ಬದಲಿಸಲಾಗಿದ್ದು, ಈ ವರೆಗೂ ಸುಮಾರು 220 ರೈಲುಗಳ ಸಂಚಾರ ಸ್ಥಗಿತವಾಗಿದೆ. ಸಂತ್ರಸ್ತರ ರಕ್ಷಣೆಗೆಂದೇ ಮೂರು ವಿಶೇಷ ರೈಲುಗಳನ್ನುಸೇವೆಗೆ ನಿಯೋಜಿಸಲಾಗಿದ್ದು, ರೈಲಿನಲ್ಲಿ ಎಲ್ಲ ರೀತಿಯ ಸೌಲಭ್ಯಗಳಿರುವಂತೆ ಮುಂಜಾಗ್ರತೆ ವಹಿಸಲಾಗಿದೆ. 
ವಿಮಾನ ಸೇವೆಯಲ್ಲಿ ವ್ಯತ್ಯಯ
ಫೊನಿ ಅಬ್ಬರಕ್ಕೆ ಒಳಗಾಗಿರುವ ಮೂರು ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ವಾತಾವರಣ ತಿಳಿಗೊಳ್ಳುವವರೆಗೂ ಯಾವುದೇ ರೀತಿಯ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರು ಹೇಳಿದ್ದಾರೆ.
ಅಂತೆಯೇ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಅಗತ್ಯ ನೆರವು ಒದಗಿಸುವಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು, ಮುಂದಿನ ಆದೇಶದವರೆಗೂ ಕಾಯುವಂತೆ ಸೂಚಿಸಲಾಗಿದೆ.
ಈ ಮಧ್ಯೆ ಇಂಡಿಗೋ ಏರ್ ಲೈನ್ಸ್‌ ಗುರುವಾರ ವಿಶಾಖಪಟ್ಟಣಂ ಮತ್ತು ಭುವನೇಶ್ವರಕ್ಕೆ ಆಗಮಿಸುವ ಹಾಗೂ ಅಲ್ಲಿಂದ ಹೊರಡುವ ತನ್ನ ವಿಮಾನಗಳ ಸೇವೆಯನ್ನು ರದ್ದುಗೊಳಿಸಿದೆ. ಗೋಏರ್‌ ಸಂಸ್ಥೆಯೂ ಶುಕ್ರವಾರ ಇದೇ ರೀತಿ ತನ್ನ ವಿಮಾನಗಳ ಸೇವೆ ರದ್ದುಪಡಿಸುವುದಾಗಿ ಘೋಷಿಸಿತ್ತು. 
SCROLL FOR NEXT