ಹರಿದ್ವಾರ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಚುನಾವಣಾ ಫಲಿತಾಂಶ ಪ್ರಕಟಗೊಂಡ ಮೇ 23 ಅನ್ನು ‘ಮೋದಿ ದಿವಸ್’ ಎಂದು ಆಚರಿಸಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಹೇಳಿದ್ದಾರೆ.
ಇಂದು ಹರಿದ್ವಾರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್ ಅವರು, ಮೋದಿ ಕೋಟ್ಯಂತರ ಜನರ ನಂಬಿಕೆ ಗೆದ್ದಿದ್ದಾರೆ. ಒಂದು ಕಡೆ ಮಹಾಘಟ್ಬಂಧನ್, ಇನ್ನೊಂದು ಕಡೆ ಮೋದಿ ಚುನಾವಣೆಯಲ್ಲಿ ಹೋರಾಟ ನಡೆಸಿದರು. ಆದರೂ ಉತ್ತರ ಪ್ರದೇಶದಲ್ಲಿ ಮೋದಿ ಅವರು ಭರ್ಜರಿ ಜಯ ಸಾಧಿಸಿದರು. ಜನತೆ ಅವರ ಕೈಯಲ್ಲಿ ಸುರಕ್ಷಿತವಾಗಿದ್ದಾರೆ ಎಂದರು.
ಮೇ 23 ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಹುದೊಡ್ಡ ಜನಾದೇಶವನ್ನು ಗೆದ್ದ ಐತಿಹಾಸಿಕ ದಿನವಾಗಿದೆ. ಈ ದಿನವನ್ನು ಮೋದಿ ದಿವಸ್ ಅಥವಾ ಲೋಕ ಕಲ್ಯಾಣ್ ದಿವಸ್ ಎಂದು ಆಚರಿಸಬೇಕು ಎಂದರು
ಇದೇ ವೇಳೆ ಗೋವಿನ ವಧೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿದ ಅವರು, ಹಸುವಿನ ಕಳ್ಳಸಾಗಣೆ ಮತ್ತು ಗೋರಕ್ಷಕರ ನಡುವಿನ ಘರ್ಷಣೆ ತಪ್ಪಿಸಲು ಇದೊಂದೇ ಮಾರ್ಗ ಎಂದರು.