ದೇಶ

ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ, ಚುರುಕುಗೊಂಡ ಶೋಧ ಕಾರ್ಯಾಚರಣೆ

Raghavendra Adiga

ಚಂಡೀಗರ್: ಭಾರತ-ಪಾಕ್ ಗಡಿಯ ಭಾರತೀಯ ಭೂಪ್ರದೇಶ ಫಿರೋಜ್‌ಪುರದಲ್ಲಿ ಸೋಮವಾರ  ರಾತ್ರಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಪಂಜಾಬ್ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ತುರ್ತು ನಿಗಾ ವಹಿಸಿವೆ.

ಗಡಿಭಾಗದಲ್ಲಿ ಐದು ಬಾರಿ ಡ್ರೋನ್ ಹಾರಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಒಮ್ಮೆ ಡ್ರೋನ್ ಬಾರತೀಯ ಗಡಿಯೊಳಕ್ಕೆ ಪ್ರವೇಶಿಸಿದೆ. ಹುಸೇನಿವಾಲಾ ಬಳಿಯ ಬಸ್ತಿ ರಾಮ್ ಲಾಲ್ ಚೆಕ್ ಪೋಸ್ಟ್ ಪ್ರದೇಶದಲ್ಲಿ ಡ್ರೋನ್ ಪತ್ತೆಯಾಗಿದೆ.ಸೋಮವಾರ ರಾತ್ರಿ 10 ರಿಂದ ರಾತ್ರಿ 10.45 ರವರೆಗೆ ಮತ್ತು ಮತ್ತೆ ಮಧ್ಯರಾತ್ರಿ 12.25 ಕ್ಕೆ ಹಾರಾಟ ನಡೆಸಿರುವುದು ಕಂಡುಬಂದಿದೆ.

ಇದೀಗ ಪಂಜಾಬ್ ಪೋಲೀಸರು, ಬಿಎಸ್‌ಎಫ್ ಹಾಗೂ ಇನ್ನಿತರೆ ಸೈನಿಕ ಪಡೆಗಳು ಮಂಗಳವಾರ ಮುಂಜಾನೆಯಿಂದಲೇ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.ಭಾರತೀಯ ಪ್ರದೇಶದಲ್ಲಿ ಮಾದಕ ವಸ್ತು ಅಥವಾ ಶಸ್ತ್ರಾಸ್ತ್ರಗಳನ್ನು ಬೀಳಿಸುವ ಸಲುವಾಗಿ ಪಾಕಿಸ್ತಾನಿ ಭಯೋತ್ಪಾದಕ ಗುಂಪು ಈ ಡ್ರೋನ್ ಕಳಿಸಿತ್ತೆ ಎನ್ನುವುದು ಸ್ಪಷ್ಟವಾಗಿಲ್ಲ. ಡ್ರೋನ್ ಹಾರಾಟದ ನಂತರ ಗಡಿಯಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ

ಗಡಿಯಲ್ಲಿ ಶಸ್ತ್ರಾಸ್ತ್ರ ಬೀಳಿಸುವ ಸಲುವಾಗಿ ಬಳಕೆಯಾಗುತ್ತಿದ್ದ ಎರಡು ಡು ಚೀನೀ ನಿರ್ಮಿತ ಡ್ರೋನ್‌ಗಳನ್ನು ಪಂಜಾಬ್ ಪೊಲೀಸರು ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.ಆ ಡ್ರೋನ್‌ಗಳು ಎಕೆ -47 ರೈಫಲ್‌ಗಳು, 80 ಕೆಜಿ ಮದ್ದುಗುಂಡುಗಳು ಮತ್ತು  ಸ್ಯಾಟಲೈಟ್ ಫೋನ್‌ಗಳನ್ನು ತರಣ್ ತರಣ್ ಜಿಲ್ಲೆಯಲ್ಲಿ ಎಂಟು ಭಾಗಗಳಲ್ಲಿ ಇಳಿಸಿದ್ದವು.ಈ ಪ್ರಕರಣದಲ್ಲಿ ಪಂಜಾಬ್ ಪೋಲೀಸರು ಇದುವರೆಗೆ ಏಳು ಜನರನ್ನು ಬಂಧಿಸಿದ್ದಾರೆ.

SCROLL FOR NEXT