ದೇಶ

ಹಿಂದು ಹೋರಾಟಗಾರ ಕಮಲೇಶ್ ತಿವಾರಿ ಹತ್ಯೆ ಪ್ರಕರಣ: 2 ಮೌಲ್ವಿ ಸೇರಿ ಐವರು ವಶಕ್ಕೆ

Manjula VN

ಲಖನೌ: ಹಿಂದೂ ಮಹಾಸಭಾದ ಮಾಜಿ ನಾಯಕ ಕಮಲೇಶ್ ತಿವಾರಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮೌಲ್ವಿಗಳು ಸೇರಿದಂತೆ 5 ಮಂದಿಯನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ. 

ಮೊಹಮ್ಮದ್ ಮುಫ್ತಿ ನಯೀಮ್ ಕಜ್ಮಿ ಮತ್ತು ಇಮಾಮ್ ಮೌಲಾನಾ ಅನ್ವಾರುಲ್ ಹಕ್ ಎಂಬ ಇಬ್ಬರು ಮೌಲ್ವಿಗಳ ಹೆಸರುಗಳನ್ನು ಎಫ್ಐಆರ್'ನಲ್ಲಿ ದಾಖಲಿಸಲಾಗಿದೆ ಎಂದು ಡಿಜಿಪಿ ಒಪಿ ಸಿಂಗ್ ಅವರು ಹೇಳಿದ್ದಾರೆ. 

ಪ್ರಕರಣ ಸಂಬಂಧ ಇನ್ನೂ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದ ಆರೋಪಿಗಳನ್ನು ಮೊಹ್ಸಿನ್ ಶೇಕ್, ಫೈಜಾನ್ ಮತ್ತು ರಶಿದ್ ಅಹ್ಮದ್ ಎಂದು ಗುರ್ತಿಸಲಾಗಿದೆ. ಪ್ರಕರಣ ಸಂಬಂಧ ಭಯೋತ್ಪಾದನಾ ಸಂಘಟನೆಗಳ ನಂಟು ಇರುವುದಾಗಿ ಈ ವರೆಗೂ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಪ್ರಕರಣ ಕುರಿತು ಉತ್ತರ ಪ್ರದೇಶ ಪೊಲೀಸರು ಹಾಗೂ ಗುಜರಾತ್ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಹಿಂದು ಸಭಾ ನಾಯಕರಾಗಿದ್ದ ತಿವಾರಿ (45)ಯವರನ್ನು ಖುರ್ಷೆದ್ ಬಾಘ್ ನಲ್ಲಿರುವ ಅವರ ನಿವಾಸದ ಎದುರು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 

2015ರಲ್ಲಿ ತಿವಾರಿಯವರು ವಿವಾದಾತ್ಮಕ ಹೇಳಿಕೆಯೊಂದರನ್ನು ನೀಡಿದ್ದು, ಈ ಕಾರಣದಿಂದಲೇ ಅವರನ್ನು ಹತ್ಯೆ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ ಎಂದು ಡಿಜಿಪಿ ತಿಳಿಸಿದ್ದಾರೆ. 

SCROLL FOR NEXT