ದೇಶ

ಹರ್ಯಾಣ ಅತಂತ್ರ: ಜೆಜೆಪಿಗೆ ಸಿಎಂ ಗಾದಿ ಆಫರ್ ಮಾಡಿದ ಕಾಂಗ್ರೆಸ್..!: ದುಷ್ಯಂತ್ ಚೌಟಾಲಾ ಹೇಳಿದ್ದೇನು?

Srinivasamurthy VN

ಚಂಡೀಘಡ: ಇಂದು ಪ್ರಕಟವಾದ ಹರ್ಯಾಣ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಯಾವೊಂದು ರಾಜಕೀಯ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಸರ್ಕಾರ ರಚನೆಯಲ್ಲಿ ಜೆಜೆಪಿ ಪಾತ್ರ ನಿರ್ಣಾಯಕವಾಗಿದೆ.

ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜೆಜೆಪಿ ಮುಖಂಡ ದುಷ್ಯಂತ್ ಚೌಟಾಲಾ ಸಿಎಂ ಗಾದಿ ನೀಡುವವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈಗ ಬರುತ್ತಿರುವ ಸುದ್ದಿಗಳ ಅನ್ವಯ ಕಾಂಗ್ರೆಸ್ ಪಕ್ಷ ಚೌಟಾಲಾ ಅವರಿಗೆ ಸಿಎಂ ಸ್ಥಾನ ನೀಡುವುದಾಗಿ ಹೇಳಿದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿರುವ ಚೌಟಾಲಾ, 'ನಾನು ಈವರೆಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಚರ್ಚೆ ನಡೆಸಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ ಎನ್ನುವುದು ಸುಳ್ಳು. ಅಂತಿಮ ಮತ್ತು ಸಂಪೂರ್ಣ ಫಲಿತಾಂಶ ಪ್ರಕಟವಾಗುವವರೆಗೂ ನಾನು ಯಾವುದೇ ಪಕ್ಷಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸುವುದಿಲ್ಲ. ಸಂಪೂರ್ಣ ಫಲಿತಾಂಶ ಲಭ್ಯವಾದ ಬಳಿಕ ಆ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ದೆಹಲಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಚೌಟಾಲಾ ನಾಳೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಹರ್ಯಾಣದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಪಕ್ಷವು ಈಗಾಗಲೇ ದುಶ್ಯಂತ್‌ ಜೊತೆಗೆ ಮಾತನಾಡಿದೆ ಕೆಲ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಈ ವರದಿಗಳನ್ನು ದುಶ್ಯಂತ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

SCROLL FOR NEXT