ದೇಶ

ನಾಳೆಯಿಂದ ಡಿಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಮಾರ್ಷಲ್‌ಗಳ ಸಂಖ್ಯೆ 13 ಸಾವಿರಕ್ಕೆ ಏರಿಕೆ: ಕೇಜ್ರಿವಾಲ್

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾಯ್ದೂಜ್ ಹಬ್ಬಕ್ಕೆ ರಾಷ್ಟ್ರ ರಾಜಧಾನಿಯ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ್ದು, ನಾಳೆಯಿಂದ ದೆಹಲಿ ಸಾರಿಗೆ ಬಸ್(ಡಿಟಿಸಿ)ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಅವರ ಭದ್ರತೆಗಾಗಿ ಬಸ್ ಮಾರ್ಷಲ್ ಗಳ ಸಂಖ್ಯೆಯನ್ನು 13 ಸಾವಿರಕ್ಕೆ ಹೆಚ್ಚಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. 

ಇಂದು ತ್ಯಾಗರಾಜ್ ಸ್ಟೇಡಿಯಂನಲ್ಲಿ ಇತ್ತೀಚಿಗಷ್ಟೇ ನೇಮಕವಾದ ಬಸ್ ಮಾರ್ಷಲ್ ಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಭಾಯ್ದೂಜ್ ಹಬ್ಬದ ಪ್ರಯುಕ್ತ ಮಂಗಳವಾರ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಭದ್ರತೆಗಾಗಿ ಈಗಾಗಲೇ 3,400 ಬಸ್ ಮರ್ಷಲ್ ಗಳನ್ನು ನೇಮಕ ಮಾಡಿದ್ದು, ಮಂಗಳವಾರದಿಂದ ಮತ್ತೆ 9600 ಮಾರ್ಷಲ್ ಗಳನ್ನು ನಿಯೋಜಿಸಲಾಗುತ್ತಿದೆ ಎಂದು ದೆಹಲಿ ಸಿಎಂ ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಭದ್ರತೆಗೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡಿದೆ. ಲೈಂಗಿಕ ಕಿರುಕುಳದಂತಹ ಘಟನೆಗಳನ್ನು ತಡೆಯಲು ದೆಹಲಿ ಸಾರಿಗೆ ಬಸ್ ಗಳನ್ನು ಮಾರ್ಷಲ್ ಗಳನ್ನು ನೇಮಿಸಲಾಗುತ್ತಿದೆ ಎಂದರು.

ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಅರವಿಂದ್ ಕೇಜ್ರಿವಾಲ್ ಈ ನೂತನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ಕೇವಲ ಬಸ್‌ಗಳಷ್ಟೇ ಅಲ್ಲದೆ ಮೆಟ್ರೋದಲ್ಲೂ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು.

SCROLL FOR NEXT