ದೇಶ

ಕುಲಭೂಷಣ್ ಜಾಧವ್ ಗೆ ಮತ್ತೊಮ್ಮೆ ದೂತಾವಾಸ ಸಂಪರ್ಕ ಕಲ್ಪಿಸಲು ಯತ್ನ: ವಿದೇಶಾಂಗ ಸಚಿವಾಲಯ

Nagaraja AB

ನವದೆಹಲಿ/ ಇಸ್ಲಮಾಬಾದ್ :ಗೂಡಾಚಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ನೌಕಾ ಪಡೆಯ ನಿವೃತ್ ಅಧಿಕಾರಿ ಮತ್ತು ಉದ್ಯಮಿ ಕುಲಭೂಷನ್ ಜಾಧವ್ ಅವರಿಗೆ ಎರಡನೇ ಬಾರಿಗೆ ದೂತಾವಾಸದ ಸಂಪರ್ಕ ಕಲ್ಪಿಸಲು ಪಾಕ್ ನಿರಾಕರಿಸಿದ ಬೆನ್ನಲ್ಲೇ, ತಾವು ಮರು ಪ್ರಯತ್ನ ನಡೆಸುವುದಾಗಿ ಭಾರತ ಹೇಳಿದೆ. 

ಈ ಕುರಿತು ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕ್ ವಿದೇಶಾಂಗ ಸಚಿವಾಲಯದ ಹೇಳಿಕೆಯ ಕುರಿತು ಮಾಹಿತಿ ಇದೆ. ಆದರೆ, ತಾವು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಪರಿಪೂರ್ಣವಾಗಿ ಪಾಲಿಸಲು ಪ್ರಯತ್ನಿಸುತ್ತೇವೆ. ಈ ಹಿಂದೆ ತೀರ್ಪು ಭಾರತದ ಪರವಾಗಿತ್ತು ಎಂಬುದನ್ನು ಮರೆಯಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗದ ಮೂಲಕ ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿರಲಿದ್ದೇವೆ ಎಂದರು.

ಕಾಶ್ಮೀರವನ್ನು ರಾಜಕೀಯಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯಲ್ಲಿ ತಿರಸ್ಕರಿಸಲಾಗಿದೆ. ಸುಳ್ಳನ್ನು ನಾಲ್ಕೈದು ಸಲ ಹೇಳಿದರೆ ಸತ್ಯವಾಗುವುದಿಲ್ಲ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ರವೀಶ್ ಕುಮಾರ್ ಹೇಳಿದರು. 

ಇದಕ್ಕೂ ಮುನ್ನ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ವಕ್ತಾರ ಮೊಹಮ್ಮದ್ ಫೈಸಲ್, ಕುಲಭೂಷಣ್ ಜಾಧವ್ ಅವರಿಗೆ ಎರಡನೇ ಬಾರಿಗೆ ದೂತಾವಾಸದ ಸಂಪರ್ಕ ಕಲ್ಪಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. 

ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಅನುಸಾರ, ಸೆಪ್ಟೆಂಬರ್ 2ರಂದು ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಮೊದಲ ದೂತಾವಾಸದ ಸಂಪರ್ಕ ಕಲ್ಪಿಸಿತ್ತು.

SCROLL FOR NEXT