ದೇಶ

ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಚುನಾವಣೆ: ಎಬಿವಿಪಿ ಜಯಭೇರಿ

Srinivasamurthy VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಭರ್ಜರಿ ಜಯ ಸಾಧಿಸಿದೆ.

ವಿವಿಯ ವಿದ್ಯಾರ್ಥಿ ಸಂಘಟನೆಯ ಒಟ್ಟು 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎವಿಬಿಪಿಯ ಮೂವರು ಅಭ್ಯರ್ಥಿಗಯ ಜಯ ಸಾಧಿಸಿದ್ದಾರೆ. ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಎನ್ಎಸ್ ಯು(ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್) ಅಭ್ಯರ್ಥಿ ಜಯಗಳಿಸಿದ್ದಾರೆ. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳು ಎಬಿವಿಪಿ ಪಾಲಾಗಿವೆ. ಕಾಂಗ್ರೆಸ್​ನ ವಿದ್ಯಾರ್ಥಿ ಘಟಕವಾದ ಎನ್​ಎಸ್​ಯುಐಗೆ ಕಾರ್ಯದರ್ಶಿ ಸ್ಥಾನ ಮಾತ್ರ ದಕ್ಕಿದೆ. ಎಬಿವಿಪಿಯ ಅಶ್ವಿತ್ ದಾಹಿಯಾ ಅವರು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೂ ಎಬಿವಿಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿದರಾದರೂ 2,053 ಮತಗಳ ಅಂತರದಿಂದ ಸೋತಿದ್ದಾರೆ.  ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಬಿವಿಪಿಯ ಅಶ್ವಿತ್ ದಾಹಿಯಾ ಅವರು ಎನ್​ಎಸ್​ಯುಐ ಅಭ್ಯರ್ಥಿ ಚೇತನಾ ತ್ಯಾಗಿ ಅವರನ್ನು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರದೀಪ್ ತನ್ವರ್ ಮತ್ತು ಶಿವಾಂಗಿ ಖರ್ವಾಲ್ ಅವರು ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಲಭ ಗೆಲುವು ಪಡೆದಿದ್ದಾರೆ.

ಕಳೆದ ವರ್ಷದ ಚುನಾವಣೆಯಲ್ಲೂ ಎಬಿವಿಪಿ ಮೂರು ಸ್ಥಾನಗಳನ್ನು ಗೆದ್ದರೆ, ಎನ್​ಎಸ್​ಯುಐ ಕೂಡ ಒಂದೇ ಸ್ಥಾನ ಪಡೆದಿತ್ತು. ಕಳೆದ ವರ್ಷ ಶೇ. 44ರಷ್ಟು ಮತದಾನವಾಗಿದ್ದರೆ, ಈ ವರ್ಷದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 39.90ಕ್ಕೆ ಇಳಿದಿದೆ. 

ಇನ್ನು ನಾಲ್ಕು ಸ್ಥಾನಗಳಿಗೆ ನಾಲ್ವರು ಮಹಿಳೆಯರು ಸೇರಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದರು. ಗುರುವಾರ ನಡೆದ ಮತದಾನದ ವೇಳೆ ಯೂನಿವರ್ಸಿಟಿಯಲ್ಲಿರುವ 1.3 ಲಕ್ಷ ವಿದ್ಯಾರ್ಥಿಗಳ ಪೈಕಿ ಸುಮಾರು 51 ಸಾವಿರದಷ್ಟು ಮಂದಿ ಮತ ಚಲಾಯಿಸಿದ್ದರು. ಹಗಲಿನ ಕಾಲೇಜುಗಳಲ್ಲಿ ಮತದಾನ ಬೆಳಗ್ಗೆ 9:30ರಿಂದ ಮಧ್ಯಾಹ್ನ 1ರವರೆಗೆ ಮತದಾನ ನಡೆದರೆ, ಸಂಜೆ ಕಾಲೇಜುಗಳಲ್ಲಿ ಮಧ್ಯಾಹ್ನ 3ರಿಂದ ಸಂಜೆ 7:30ರವರೆಗೆ ವೋಟಿಂಗ್ ನಡೆದಿತ್ತು.

SCROLL FOR NEXT