ದೇಶ

ಕೊವಿಡ್-19: ದೆಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 110 ಮಂದಿಗೆ ಪಾಸಿಟಿವ್

Lingaraj Badiger

ಚೆನ್ನೈ: ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 110 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 234ಕ್ಕೆ ಏರಿಕೆಯಾಗಿದೆ.

ಜಮಾತ್ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗಿ ಎಂದು ತಮಿಳುನಾಡು ಸರ್ಕಾರ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ 15 ಜಿಲ್ಲೆಗಳ ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 15 ಜಿಲ್ಲೆಗಳ 110 ಮಂದಿಯ ವರದಿ ಇಂದು ಪಾಸಿಟಿವ್ ಬಂದಿದೆ. ಇನ್ನು 668 ಮಂದಿಯ ವರದಿ ಬರಬೇಕಾಗಿದೆ.

ತಮಿಳುನಾಡಿನಿಂದ ಸುಮಾರು 1500 ಮಂದಿ ದೆಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದ್ದು, ತಮಿಳುನಾಡು ಸರ್ಕಾರ ಈ ಎಲ್ಲರನ್ನು ಗುರುತಿಸಿ, ಪರೀಕ್ಷೆಗೆ ಒಳಪಡಿಸಬೇಕಾಗಿದೆ.

ಜಮಾತ್ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 2,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಮಾ. 13ರಿಂದ 15ರವರೆಗೆ ಈ ಸಭೆ ನಡೆದಿತ್ತು. ಇದೀಗ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 110 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

SCROLL FOR NEXT