ದೇಶ

ಕೊರೋನಾ ವೈರಸ್ ನಿಯಂತ್ರಣದಲ್ಲಿ ವಿಶ್ವದ ಇತರೆ ದೇಶಗಳಿಗಿಂತ ಭಾರತವೇ ಮುಂದು: ಅಧ್ಯಯನ

Srinivasamurthy VN

ವಾಷಿಂಗ್ಟನ್: ವಿಶ್ವದ 130ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಯಂತ್ರಣದಲ್ಲಿ ಭಾರತ ದೇಶ ಮುಂದಿದ್ದು, ಲಾಕ್ ಡೌನ್ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.

ಈ ಕುರಿತಂತೆ ಆಕ್ಸ್‌ಫರ್ಡ್‌ ಕೋವಿಡ್‌ 19 ಗವರ್ನ್‌ಮೆಂಟ್‌ ರೆಸ್ಪಾನ್ಸ್‌ ಟ್ರಾಕರ್ (ಆಕ್ಸ್‌ಫರ್ಡ್‌ ಸಿಜಿಆರ್‌ಟಿ) ತನ್ನ ವರದಿ ನೀಡಿದ್ದು, ಮಾರಕ ಕೊರೋನಾ ವೈರಸ್ ನಿಯಂತ್ರಣದಲ್ಲಿ ಭಾರತವೇ ಮುಂದಿದೆ. ಭಾರತವು ಜಗತ್ತಿನಲ್ಲೇ ಅತ್ಯಂತ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದೆ‌ ಎಂದು  ಹೇಳಿದೆ.

ಕೊರೋನಾ ವೈರಸ್ ವಿರುದ್ಧ ವಿಶ್ವದ 73 ರಾಷ್ಟ್ರಗಳು ಕೈಗೊಂಡಿರುವ ಕ್ರಮಗಳ ಕುರಿತು ಆಕ್ಸ್‌ಫರ್ಡ್‌ ಸಿಜಿಆರ್‌ಟಿ ಅಧ್ಯಯನ ನಡೆಸಿದ್ದು, ವಿವಿಧ ರಾಷ್ಟ್ರಗಳು ಕೊರೊನಾ ವೈರಸ್‌ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಆಕ್ಸ್‌ಫರ್ಡ್‌ ಸಿಜಿಆರ್‌ಟಿ ಪರಸ್ಪರ ತಾಳೆ ಮಾಡಿದೆ. ಈ ವಿಚಾರದಲ್ಲಿ  ಭಾರತ 100 ಅಂಕಗಳನ್ನು ಪಡೆದಿದೆ ಎಂದು ‘ಆಕ್ಸ್‌ಫರ್ಡ್‌ ಸಿಜಿಆರ್‌ಟಿ’ ಹೇಳಿದೆ.

ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ 'ಬ್ಲವಾಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್'ನ ಸಂಶೋಧಕರು 'ಆಕ್ಸ್‌ಫರ್ಡ್‌ ಸಿಜಿಆರ್‌ಟಿ'ಯನ್ನು ರಚಿಸಿತ್ತು. ಜಗತ್ತಿನ ಹಲವು ರಾಷ್ಟ್ರಗಳ ಸರ್ಕಾರಗಳು ಕೊರೋನಾ ವೈರಸ್ ನಿಯಂತ್ರಣಕ್ಕೆ  ತೆಗೆದುಕೊಂಡಿರುವ ವಿಭಿನ್ನ, ಸಾಮಾನ್ಯ ನೀತಿಗಳ ಬಗ್ಗೆ 'ಆಕ್ಸ್‌ಫರ್ಡ್‌ ಸಿಜಿಆರ್‌ಟಿ ಮಾಹಿತಿ ಸಂಗ್ರಹಿಸಿದ್ದು, ಅಷ್ಟು ಮಾತ್ರವಲ್ಲದೆ ಸಂಚಾರ ನಿರ್ಬಂಧ, ಶಾಲೆಗಳನ್ನು ಮುಚ್ಚುವುದು, ಆರ್ಥಿಕ ಕ್ರಮಗಳು ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ 13 ಕ್ರಮಗಳನ್ನು 'ಆಕ್ಸ್‌ಫರ್ಡ್‌ ಸಿಜಿಆರ್‌ಟಿ'  ಅಧ್ಯಯನಕ್ಕೆ ಒಳಪಡಿಸದೆ. ಈ ಕಟ್ಟುನಿಟ್ಟಿನ ಕ್ರಮಗಳಿಗೆ ಅಂಕ ನೀಡಿದೆ. ಅಲ್ಲಿ ನೀಡಲಾದ ಅಂಕಗಳನ್ನು ಸಾಮಾನ್ಯ ಕಟ್ಟುನಿಟ್ಟಿನ ಕ್ರಮದ ಸೂಚ್ಯಂಕದೊಂದಿಗೆ ತುಲನೆ ಮಾಡಿದೆ. ಅದರಲ್ಲಿ ಭಾರತಕ್ಕೆ ಹೆಚ್ಚಿನ ಅಂಕಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ.

ಇನ್ನು ಭಾರತ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾ, ಇಸ್ರೇಲ್, ನ್ಯೂಜಿಲೆಂಡ್ ಮತ್ತು ಮಾರಿಷಸ್ ದೇಶಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಆಕ್ಸ್‌ಫರ್ಡ್‌ ಸಿಜಿಆರ್‌ಟಿ ಸಮಾಧಾನ ವ್ಯಕ್ತಪಡಿಸಿದ್ದು, ಟ್ರ್ಯಾಕರ್‌ನಲ್ಲಿ ಈ ದೇಶಗಳೂ ಕೂಡ 100 ಅಂಕಗಳನ್ನು ಗಳಿಸಿವೆ. ಇನ್ನು ಫ್ರಾನ್ಸ್, ಇಟಲಿ, ಜೆಕ್  ರಿಪಬ್ಲಿಕ್ 90 ಅಂಕಗಳನ್ನು ಗಳಿಸಿವೆ. ಜರ್ಮನಿ ಮತ್ತು ಅಮೆರಿಕ ಈ ಪಟ್ಟಿಯಲ್ಲಿ 70 ಅಂಕಗಳಿಸಿವೆ.

SCROLL FOR NEXT