ದೇಶ

ಭಾರತದಲ್ಲಿ ಶೇ.0.33ರಷ್ಟು ಕೊರೋನಾ ಸೋಂಕಿತರು ಮಾತ್ರ ವೆಂಟಿಲೇಟರ್ ನಲ್ಲಿದ್ದಾರೆ: ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: ಭಾರತದಲ್ಲಿ ಶೇ.0.33ರಷ್ಟು ಕೊರೋನಾ ವೈರಸ್ ಸೋಂಕಿತರು ಮಾತ್ರ ವೆಂಟಿಲೇಟರ್ ನಲ್ಲಿದ್ದಾರೆ ಎಂದು ಬುಧವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೋನಾ ವೈರಸ್ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು, ಭಾರತದಲ್ಲಿ ಕೊರೋನಾ ವೈರಸ್ ಸಂಪೂರ್ಣ ನಿಯಂತ್ರಣದಲ್ಲಿದೆ. ಸಾವಿನ ಸಂಖ್ಯೆ ಪ್ರಮಾಣ ಕೂಡ ಗಣನೀಯವಾಗಿ ಇಳಿಕೆಯಾಗಿದ್ದು, ಭಾರತದಲ್ಲಿ  ಶೇ.0.33ರಷ್ಟು ಕೊರೋನಾ ವೈರಸ್ ಸೋಂಕಿತರು ಮಾತ್ರ ವೆಂಟಿಲೇಟರ್ ನಲ್ಲಿದ್ದಾರೆ. ಅಂತೆಯೇ ಶೇ.1.5ರಷ್ಚು ಸೋಂಕಿತರು ಕೃತಕ ಆಮ್ಲಜನಕ ಅಳವಡಿಸಲಾಗಿದ್ದು,. 2.34 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂದು ಹೇಳಿದರು.

ಭಾರತದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣ ವೇಗ ಇನ್ನೂ ಕುಸಿತ
ಇದೇ ವೇಳೆ ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ದ್ವಿಗುಣ ವೇಗ ಇನ್ನೂ ಕಡಿಮೆಯಾಗಿದ್ದು, ಪ್ರತೀ 11.3 ದಿನಗಳಿಗೆ ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದ್ವಿಗುಣವಾಗುತ್ತಿದೆ. ಜಾಗತಿಕವಾಗಿ ಕೊರೋನಾ ವೈರಸ್ ಸಾವಿನ ಪ್ರಮಾಣ ಶೇ.7ರಷ್ಟು ಇದ್ದರೆ,  ಭಾರತದಲ್ಲಿ ಮಾತ್ರ ಶೇ.3ರಷ್ಟಿದೆ ಎಂದು ಹೇಳಿದರು.

ಭಾರತದಲ್ಲಿ ಸಾವಿನ ಸಂಖ್ಯೆ 1,008ಕ್ಕೆ ಏರಿಕೆ, ಸೋಂಕಿತರ ಸಂಖ್ಯೆ 31,787ಕ್ಕೆ ಏರಿಕೆ
ಇದೇ ವೇಳೆ ಭಾರತದಲ್ಲಿ ಕೊರೋನಾ ಸೋಂಕಿತರ ಮಾಹಿತಿ ನೀಡಿದ ಹರ್ಷ ವರ್ಧನ್ ಅವರು, ಕಳೆದ 24 ಗಂಟೆಗಳ ಅಂತರದಲ್ಲಿ 71 ಮಂದಿ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಭಾರತದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 1008ಕ್ಕೆ ಏರಿಕೆಯಾಗಿದೆ. ಅಂತೆಯೇ  ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 1,813 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು, ಆ ಮೂಲಕ ಭಾರತದಲ್ಲಿ ವೈರಸ್ ಸೋಂಕಿತರ ಸಂಖ್ಯೆ 31,787ಕ್ಕೆ ಏರಿಕೆಯಾಗಿದೆ. ಈ ಪೈಕಿ 7,796 ಸೋಂಕಿತರು ಗುಣಮುಖರಾಗಿದ್ದು. ಕೊರೋನಾ ವೈರಸ್ ನಿಂದ  ಗುಣಮುಖರಾದವರ ಪ್ರಮಾಣ ಶೇ.24.52ಕ್ಕೆ ಏರಿಕೆಯಾಗಿದೆ. ಅಂತೆಯೇ ವಿವಿಧ ಆಸ್ಪತ್ರೆಗಳಲ್ಲಿ 22,982 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 111 ಮಂದಿ ವಿದೇಶಿಗರು ಕೂಡ ಸೇರಿದ್ದಾರೆ ಎಂದು ಹೇಳಿದರು.

ಕೋವಿಡ್-19 ಟೆಸ್ಟ್ ಗೆ ಲಯನ್ಸ್ ಕ್ಲಬ್ ಸಾಥ್
ಇನ್ನು ಭಾರತದಲ್ಲಿ ಕೋವಿಡ್-19 ಟೆಸ್ಟ್ ಪ್ರಮಾಣದ ವೇಗ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಸರ್ಕಾರಿ ಸ್ವಾಮ್ಯದ 288 ಲ್ಯಾಬೋರೇಟರಿಗಳಲ್ಲದೇ ಖಾಸಗಿ 97 ಲ್ಯಾಬೊರೇಟರಿ ಸಮೂಹಗಳೊಂದಿಗೆ ಕೂಡ ಚರ್ಚೆ ನಡೆಸಿದೆ. ಅಂತೆಯೇ ದೇಶಾದ್ಯಂತ ಸುಮಾರು 16000 ಕಲೆಕ್ಷನ್ ಕೇಂದ್ರಗಳನ್ನು ನಿರ್ಮಾಣ ಮಾಡಿ ಪ್ರತಿ ನಿತ್ಯ 60 ಸಾವಿರ ಟೆಸ್ಟ್ ಗಳನ್ನು ನಡೆಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು. ಇದಕ್ಕಾಗಿ ಲಯನ್ಸ್ ಕ್ಲಬ್ ಜೊತೆ ಕೂಡ ಮಾತುಕತೆ ನಡೆಸಿದ್ದು, ಸರ್ಕಾರದ ಈ ಕಾರ್ಯಕ್ಕೆ ಲಯನ್ಸ್ ಕ್ಲಬ್ ಸಾಥ್ ನೀಡುತ್ತಿದೆ ಎಂದರು.

SCROLL FOR NEXT