ದೇಶ

ಕಮಲ್ ನಾಥ್ ಸರ್ಕಾರ ಉರುಳಿಸುವಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ: ಬಿಜೆಪಿ ಹಿರಿಯ ನಾಯಕ

Lingaraj Badiger

ಭೋಪಾಲ್: 2020ರ ಮಾರ್ಚ್‌ನಲ್ಲಿ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ಬುಧವಾರ ಬಹಿರಂಗಪಡಿಸಿದ್ದಾರೆ.

ಮಾಜಿ ಸಚಿವ ಹಾಗೂ ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ವಿಜಯವರ್ಗಿಯ ಅವರು ಇಂದು ಇಂದೋರ್‌ನಲ್ಲಿ ಪಕ್ಷದ ಕಿಸಾನ್ ಸಮ್ಮೇಳನ ಉದ್ದೇಶಿಸಿ ಮಾತನಾಡುವಾಗ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಯಾರಿಗೂ ಹೇಳಬೇಡಿ, ನಾನು ಇದನ್ನು ಇಲ್ಲಿಯವರೆಗೆ ಯಾರಿಗೂ ಹೇಳಿಲ್ಲ. ಈಗ ನಾನು ಅದನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಕಮಲ್ ನಾಥ್ ಸರ್ಕಾರವನ್ನು ಉರುಳಿಸುವಲ್ಲಿ ಯಾರಾದರೂ ಪ್ರಮುಖ ಪಾತ್ರ ವಹಿಸಿದರೆ, ಅದು ನರೇಂದ್ರ ಮೋದಿ ಮಾತ್ರ, ಧರ್ಮೇಂದ್ರ ಪ್ರಧಾನ್ ಅಲ್ಲ ಎಂದು ವಿಜಯವರ್ಗಿಯಾ ಅವರು ಹೇಳಿದ್ದಾರೆ. ಈ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ವೇದಿಕೆಯಲ್ಲಿದ್ದರು.

ವಿಜಯವರ್ಗಿಯಾ ಅವರ ರೋಚಕ ಹೇಳಿಕೆಯ ವೀಡಿಯೊವನ್ನು ಟ್ವೀಟ್ ಮಾಡಿರುವ ಮಧ್ಯ ಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಅವರು, "ಸಂವಿಧಾನಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸಂವಿಧಾನಿಕ ರೀತಿಯಲ್ಲಿ ಕೆಳಗಿಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಈಗ ಸ್ಪಷ್ಟವಾಗಿದೆ" ಎಂದು ಹೇಳಿದ್ದಾರೆ.

ಮೊದಲ ದಿನದಿಂದಲೂ ಕಾಂಗ್ರೆಸ್ ಇದನ್ನು ಹೇಳುತ್ತಿದೆ, ಆದರೆ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಆಂತರಿಕ ಜಗಳ ಕಾರಣ ಎಂದು ಬಿಜೆಪಿ ದೂಷಿಸುತ್ತಿದೆ. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರೇ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಎಂದು ಸಲೂಜಾ ಅವರು ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT