ದೇಶ

ವಿಸ್ಟ್ರಾನ್ ಘಟಕ 15-20 ದಿನಗಳಲ್ಲಿ ಪುನಾರಂಭ; ಹಾನಿಯಿಂದಾಗಿರುವ ನಷ್ಟ 437 ಕೋಟಿಯಲ್ಲ 50 ಕೋಟಿ!

Srinivas Rao BV

ಕೋಲಾರ: ಇತ್ತೀಚೆಗೆ ಗಲಭೆಗೆಯಿಂದ ಹಾನಿಗೊಳಗಾಗಿದ್ದ ಐಫೋನ್ ತಯಾರಿಕಾ ಸಂಸ್ಥೆ ಕೋಲಾರದಲ್ಲಿರುವ ವಿಸ್ಚ್ರನ್ ಕಾರ್ಪೋರೇಷನ್ ಘಟಕ 15-20 ದಿನಗಳಲ್ಲಿ ಪುನಾರಂಭಗೊಳ್ಳಲಿದೆ.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರೀಡಿಫ್ ವರದಿ ಪ್ರಕಟಿಸಿದ್ದು, ವಿಸ್ಟ್ರನ್ ಘಟಕದಲ್ಲಿ ಉಂಟಾದ ಗಲಭೆಯಿಂದ ತೈವಾನ್ ಮೂಲದ ಸಂಸ್ಥೆಯ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು ಎಂಬ ಭರವಸೆಯನ್ನು ಸರ್ಕಾರ ನೀಡಿದೆ. 

ಕರ್ನಾಟಕದ ಪ್ರತಿಷ್ಠೆಗೆ ಕುತ್ತು ತಂದ ಘಟನೆಯೆಂದು ವಿಸ್ಟ್ರನ್ ಘಟಕದ ಮೇಲಿನ ದಾಳಿಯನ್ನು ಪರಿಗಣಿಸಲಾಗಿದ್ದು, ಹೂಡಿಕೆದಾರರಿಗೆ ಸಮಸ್ಯೆಯಾಗದಂತೆ ತ್ವರಿತ ಕ್ರಮವನ್ನು ಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ. 

ವೇತನ ಸಮಸ್ಯೆ ಗುತ್ತಿಗೆದಾರರ ಕಡೆಯಿಂದ ಆಗಿದೆಯೇ ಅಥವಾ ಸಂಸ್ಥೆಯ ಕಡೆಯಿಂದ ಆಗಿದೆಯೇ ಎಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ. ತನಿಖೆ ಪ್ರಾರಂಭವಾಗಿದ್ದು ಶೀಘ್ರವೇ ವರದಿ ಸಿಗಲಿದೆ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. 

ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನಕ್ಕಾಗಿ ಇರುವ ಇಲಾಖೆಯ ಕಾರ್ಯದರ್ಶಿ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಈ ವಿಷಯವಾಗಿ ಮಾತನಾಡಿದ್ದು, ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
 
ಈ ನಡುವೆ, ಗಲಭೆಯಿಂದ ಉಂಟಾದ ನಷ್ಟದ ಪ್ರಮಾಣ 437 ಕೋಟಿ ರೂಪಾಯಿಯಲ್ಲ ಬದಲಾಗಿ 50 ಕೋಟಿ ರೂಪಾಯಿ ಎಂದು ಸಂಸ್ಥೆ ತೈವಾನ್ ಸ್ಟಾಕ್ ವಿನಿಮಯಕ್ಕೆ ತಿಳಿಸಿದೆ.

SCROLL FOR NEXT