ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯ ಪ್ರಹಸನ ಮುಂದುವರೆದಿದ್ದು, ಟಿಎಂಸಿ ಶಾಸಕರ ರಾಜಿನಾಮೆ ಬೆನ್ನಲ್ಲೇ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳದ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು, 'ಟಿಎಂಸಿಯ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ. ಸಂವಿಧಾನದ ನಿಬಂಧನೆಗಳು ಮತ್ತು ಸದನದ ನಿಯಮಗಳಿಗೆ ಅನುಗುಣವಾಗಿ ಸುವೇಂದು ರಾಜೀನಾಮೆ ಸಲ್ಲಿಸಿಲ್ಲ. ಹಾಗಾಗಿ, ಅವರ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಡಿ. 21ರಂದು ತಮ್ಮ ಕೊಠಡಿಗೆ ಖುದ್ದು ಹಾಜರಾಗುವಂತೆಯೂ ಸುವೇಂದು ಅವರಿಗೆ ಬ್ಯಾನರ್ಜಿ ಸೂಚಿಸಿದ್ದಾರೆ ಎನ್ನಲಾಗಿದೆ.
'ಸುವೇಂದು ಅವರು ವೈಯಕ್ತಿಕವಾಗಿ ನನ್ನನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿಲ್ಲ. ಅಷ್ಟೇ ಅಲ್ಲ, ರಾಜೀನಾಮೆಯು ಸ್ವಯಂಪ್ರೇರಿತವಾದದ್ದೇ ಅಥವಾ ಸಕಾರಣಕ್ಕಾಗಿ ನೀಡಲಾಗಿದೆಯೇ ಎಂಬ ಬಗ್ಗೆ ಯಾವುದೇ ಸುಳಿವೂ ಇಲ್ಲ. ರಾಜೀನಾಮೆಯು ಸ್ವಯಂಪ್ರೇರಿತವಾದದ್ದು ಮತ್ತು ಸಕಾರಣವಾದದ್ದು ಎನ್ನುವ ಬಗ್ಗೆ ನನಗೆ ಮನವರಿಕೆಯಾಗದ ಹೊರತು ಸಂವಿಧಾನದ ನಿಬಂಧನೆಗಳು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳಡಿ ನಾನು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.