ನವದೆಹಲಿ: ಭಾರತದಲ್ಲಿ ಮಾಹಾಮಾರಿ ಕೊರೋನಾ ವೈರಸ್ 2ನೇ ಅಲೆ ನಿಧಾನಗತಿಯಲ್ಲಿ ಆರಂಭವಾಗುತ್ತಿರುವ ಎಲ್ಲಾ ಬೆಳವಣಿಗೆಗಳು ಕಂಡು ಬರುತ್ತಿವೆ. ಭಾರತದಲ್ಲಿ ರೂಪಾಂತರಿ ಕೊರೋನಾ ವೈರಸ್ ಕಾಟ ಶುರುವಾಗಿದ್ದು, ಈಗಾಗಲೇ 20 ಮಂದಿಯಲ್ಲಿ ಈ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದೀಗ ಉತ್ತರಪ್ರದೇಶದಲ್ಲಿ 2 ವರ್ಷದ ಮಗು ಹಾಗೂ ಪೋಷಕರಲ್ಲೂ ಸೋಂಕು ಪತ್ತೆಯಾಗಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.
ಡಿಸೆಂಬರ್ 14 ರಂದು ಲಂಡನ್ ನಿಂದ ಮಗು ಹಾಗೂ ಮಗುವಿನ ತಾಯಿ, ತಂದೆ ಮೀರುತ್'ಗೆ ಆಗಮಿಸಿದ್ದರು. ಮೂವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮೂವರಲ್ಲೂ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿದೆ.
ಈಗಾಗಲೇ ಮೂವರನ್ನೂ ಸುಭಾರ್ಟಿ ವೈದ್ಯಕೀಯ ಕಾಲೇಜಿನಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಮೂವರ ಆರೋಗ್ಯವನ್ನೂ ಅಧಿಕಾರಿಗಳು ಆಗಾಗ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ರೂಪಾಂತರಿ ಕೊರೋನಾ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿತ್ತು.