ದೇಶ

ಕೊರೋನಾದಿಂದ ಬೇಸತ್ತ ಜನರಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಸಿಹಿಸುದ್ದಿ!

Sumana Upadhyaya

ಅಹ್ಮದಾಬಾದ್: 2021ನೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ, ಕಾಳಜಿಯನ್ನು ಮರೆಯದೆ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ಲಸಿಕೆ ಬಂದ ನಂತರವೂ ಇದನ್ನು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ.

ರಾಜ್ ಕೋಟ್ ನಲ್ಲಿ ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹೊಸ ಕೊರೋನಾ ಕೇಸುಗಳು ದೇಶದಲ್ಲಿ ಕಡಿಮೆಯಾಗುತ್ತಿದೆ. ಲಸಿಕೆ ಬಿಡುಗಡೆಗೆ ಕೊನೆಯ ಹಂತದ ತಯಾರಿ ನಡೆಯುತ್ತಿದೆ. ಭಾರತದಲ್ಲಿ ತಯಾರಾದ ಲಸಿಕೆಗಳನ್ನು ಜನರಿಗೆ ನೀಡಲಾಗುವುದು ಎಂದು ವರ್ಷದ ಕೊನೆಗೆ ಭರವಸೆ ನೀಡಿದ್ದಾರೆ.

ಭಾರತ ದೇಶದ ವಿಶ್ವದಲ್ಲಿಯೇ ಆರೋಗ್ಯದ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಸುಧಾರಿಸಲು ತ್ವರಿತಗತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚನೆ ಮಾಡಿದ ನಂತರ ಆರೋಗ್ಯ ಶಿಕ್ಷಣದ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಾಗಲಿದೆ ಎಂದರು. 

ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಬಡಜನರ 30 ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಉಳಿತಾಯವಾಗಿದೆ. ಜನ ಔಷಧಿ ಕೇಂದ್ರ ಕೂಡ ಬಡವರಿಗೆ ಪ್ರಯೋಜನವಾಗಿದೆ. ದೇಶಾದ್ಯಂತ 7 ಸಾವಿರಕ್ಕೂ ಹೆಚ್ಚು ಕೇಂದ್ರಗಳು ಶೇಕಡಾ 90ರಷ್ಟು ಅಗ್ಗದ ದರದಲ್ಲಿ ಜನರಿಗೆ ಔಷಧಿ ಒದಗಿಸುತ್ತಿದೆ. ಪ್ರತಿದಿನ ಮೂರೂವರೆ ಲಕ್ಷಕ್ಕೂ ಅಧಿಕ ಬಡ ರೋಗಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಕಳೆದ 6 ವರ್ಷಗಳಲ್ಲಿ ನಾವು 10 ಹೊಸ ಏಮ್ಸ್ ಗಳ ಕಾರ್ಯ ಆರಂಭಿಸಿದ್ದು ಅವುಗಳಲ್ಲಿ ಕೆಲವು ಕಾರ್ಯನಿರ್ವಹಣೆ ಮಾಡುತ್ತಿವೆ. 20 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಹ ಕಟ್ಟಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

SCROLL FOR NEXT