ನವದೆಹಲಿ: ಜಪಾನ್ ರಾಷ್ಟ್ರದ ಯೋಕೋಹಾಮಾ ಬಂದರಿನಲ್ಲಿ ಕೊರೋನಾ ತಪಾಸಣೆಗಾಗಿ ನಿಂತಿರುವ ಡೈಮಂಡ್ ಪ್ರಿನ್ಸೆಸ್ ಪ್ರವಾಸಿ ಹಡಗಿಗೆ ಜಪಾನ್ ಸರ್ಕಾರವು ತನ್ನ ಸೇನೆ ರವಾನಿಸುವ ಸಾಧ್ಯತೆಗಳಿವೆ. ಹಡಗಿನಲ್ಲಿ 3700 ಮಂದಿ ಇದ್ದು, ಇವರಲ್ಲಿ 138 ಭಾರತೀಯರಿದ್ದಾರೆ. ಈ ಪೈಕಿ 132 ಪ್ರಯಾಣಿಕರಿದ್ದರೆ, ಇನ್ನುಳಿದ 6 ಸಿಬ್ಬಂದಿ ಪೈಕಿ ಕಾರವಾರದ ಅಭಿಷೇಕ್ ಮಗರ್ ಕೂಡ ಒಬ್ಬರಾಗಿದ್ದಾರೆ.
ಹಡಗಿನಲ್ಲಿ 64 ಮಂದಿಯಲ್ಲಿ ಈಗಾಗಲೇ ಕೊರೋನಾ ವೈರಾಣು ದೃಢಪಟ್ಟಿದೆ. ಉಳಿದವರ ತಪಾಸಣೆ ನಡದಿದೆ. ಸುದೈವವಶಾತ್ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದು, ತಮ್ಮನ್ನು ಹಡಗಿನಿಂದ ತೆರವು ಮಾಡುವಂತೆ ಕೋರಿ ಭಾರತ ಸರ್ಕಾರ ಹಾಗೂ ಜಪಾನ್ ಸರ್ಕಾರದ ಮೊರೆ ಹೋಗಿದ್ದರು.
ಇದೀಗ ಈ ಮನವಿಗೆ ಓಗೊಟ್ಟು ಜಪಾನ್ ಸರ್ಕಾರವು ಸೇನೆಯನ್ನು ನೆರವಿಗೆ ಕಳಿಸುವ ಸಾಧ್ಯತೆಯಿದೆ. ಅದಾಗ್ಯೂ, ಸೇನೆಯನ್ನು ಏಕೆ ರವಾನಿಸುತ್ತಿದೆ ಎಂಬುದು ಗೊತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.