ದೇಶ

'ದೆಹಲಿ ಐ ಲವ್ ಯು': ಚುನಾವಣಾ ಗೆಲುವಿನ ಬಳಿಕ ಮತದಾರರಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್

Srinivasamurthy VN

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದ ಎಲ್ಲ ಮತದಾರರಿಗೂ ನನ್ನ ಆತ್ಮೀಯ ವಂದನೆಗಳು ಎಂದು ಆಪ್ ನಾಯಕ ಆರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ದೆಹಲಿಯ ಒಟ್ಟು 70 ಕ್ಷೇತ್ರಗಳ ಪೈಕಿ 63 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದೆ. ಆ ಮೂಲಕ ದೆಹಲಿಯಲ್ಲಿ ಮತ್ತೆ ಅಧಿಕಾರದ ಗುದ್ದುಗೆಯತ್ತ ಆಪ್ ದಾಪುಗಾಲಿರಿಸಿದ್ದು, ಇದೇ ಖುಷಿಯಲ್ಲಿ ಆಪ್ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದ ಎಲ್ಲ ಮತದಾರರಿಗೂ ನನ್ನ ಆತ್ಮೀಯ ವಂದನೆಗಳು ಎಂದು ಹೇಳಿದರು.

ಇದು ನಮ್ಮ ಗೆಲುವಲ್ಲ. ದೆಹಲಿ ಜನತೆಯ ಗೆಲುವು. ಅಭಿವೃದ್ದಿಗೆ ಸಿಕ್ಕ ಗೆಲುವು. ದೆಹಲಿ ಜನತೆ ಅಭಿವೃದ್ಧಿಗೆ ತಮ್ಮ ಮತ ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಅಧಿಕಾರ ನೀಡಿದ್ದಕ್ಕಾಗಿ ದೆಹಲಿಯ ಪ್ರತೀಯೊಬ್ಬ ಮತದಾರನಿಗೂ ನಾನು ತುಂಬು ಹೃದಯದ ಧನ್ಯವಾದ ಹೇಳುತ್ತೇನೆ. ಆಪ್ ಗೆ ಮತ ನೀಡುವ ಮೂಲಕ ದೆಹಲಿ ಜನತೆ ಹೊಸ ಬಗೆಯ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ. ರಾಜಕಾರಣದ ರಾಜಕೀಯವಲ್ಲ, ಇದು ಅಭಿವೃದ್ದಿ ಮತ್ತು ಕೆಲಸದ ರಾಜಕೀಯ. ನಾವು ಮಾಡಿದ ಕೆಲಸ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿ ದೆಹಲಿ ಜನತೆ ನಮ್ಮನ್ನು ಆರಿಸಿದ್ದಾರೆ. ಅವರ ಆಶೋತ್ತರಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಮುಂದಿನ ಐದು ವರ್ಷವೂ ಕೂಡ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅಂತೆಯೇ ಇದೇ ವೇಳೆ ಬಿಜೆಪಿಗೆ ಟಾಂಗ್ ನೀಡಿದ ಕೇಜ್ರಿವಾಲ್, ಈ ಚುನಾವಣೆಯಲ್ಲಿ ಕೇವಲ ಆಪ್ ಮಾತ್ರವಲ್ಲ.. ಭಾರತ ಮಾತೆಯೂ ಜಯಭೇರಿ ಭಾರಿಸಿದ್ದಾಳೆ. ಈ ಹಿಂದಿನ ಐದು ವರ್ಷಗಳಂತೆಯೇ ಮುಂದಿನ ಐದು ವರ್ಷವೂ ಕೂಡ ನಾವೆಲ್ಲೂರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಕೇಜ್ರಿವಾಲ್ ಹೇಳಿದರು.

SCROLL FOR NEXT