ದೇಶ

ದೆಹಲಿ ಹೊತ್ತಿ ಉರಿಯುವಾಗ ಅಮಿತ್ ಶಾ ಎಲ್ಲಿದ್ದರು?: ಶಿವಸೇನೆ ಪ್ರಶ್ನೆ 

Sumana Upadhyaya

ಮುಂಬೈ:ಈಶಾನ್ಯ ದೆಹಲಿಯಲ್ಲಿ ತೀವ್ರ ಹಿಂಸಾಚಾರ ನಡೆದು 38 ಮಂದಿ ಮೃತಪಟ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದಾಗ ಗೃಹ ಸಚಿವ ಅಮಿತ್ ಶಾ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂದು ಶಿವಸೇನೆ ಪ್ರಶ್ನೆ ಮಾಡಿದೆ.


ದೆಹಲಿ ಹೊತ್ತಿ ಉರಿಯುತ್ತಿರುವಾಗ, ಜನರು ತಮ್ಮ ಅಸಹಾಯಕತೆ, ಸಿಟ್ಟು, ಆಕ್ರೋಶ ತೋರಿಸಿಕೊಳ್ಳುತ್ತಿದ್ದಾಗ ಗೃಹ ಸಚಿವ ಅಮಿತ್ ಶಾ ಎಲ್ಲಿದ್ದರು, ಅವರೇನು ಮಾಡುತ್ತಿದ್ದರು, 38 ಜನ ಸತ್ತಿದ್ದಾರೆ, ಅನೇಕರಿಗೆ ಗಾಯವಾಗಿದೆ, ಸಾರ್ವಜನಿಕ ಆಸ್ತಿಪಾಸ್ತಿಗಳು ಸಾಕಷ್ಟು ನಷ್ಟವಾಗಿದೆ, ಇಷ್ಟಾದರೂ ಕೇಂದ್ರ ಸರ್ಕಾರ ಏಕೆ ತಕ್ಷಣ ಕಾರ್ಯಪ್ರವೃತ್ತವಾಗಲಿಲ್ಲ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಪ್ರಶ್ನೆ ಮಾಡಿದೆ.


ಎನ್ ಡಿಎ ಬದಲು ಈಗ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬೇರಾವುದೇ ಮೈತ್ರಿ ಸರ್ಕಾರ ಇರುತ್ತಿದ್ದರೆ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು. ಕೇಂದ್ರದಲ್ಲಿ ವಿರೋಧ ಪಕ್ಷಗಳು ದುರ್ಬಲವಾಗಿರುವುದರಿಂದ ಗೃಹ ಸಚಿವರ ರಾಜೀನಾಮೆ ಒತ್ತಡಕ್ಕೆ ಬಲ ಬಂದಿಲ್ಲ ಎಂದಿದೆ.


ಸೋನಿಯಾ ಗಾಂಧಿಯವರು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಒಂದು ಕಡೆ ದೆಹಲಿಯಲ್ಲಿ ಪೊಲೀಸರು ಸೇರಿದಂತೆ 38 ಜನ ಪ್ರಾಣ ಕಳೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಕೇಂದ್ರ ಸಂಪುಟದ ಅರ್ಧಕ್ಕೂ ಹೆಚ್ಚು ಸಂಖ್ಯೆಯ ಸಚಿವರು ಅಹಮದಾಬಾದ್ ನಲ್ಲಿ ಅಮೆರಿಕ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೃಹ ಸಚಿವ ಅಮಿತ್ ಶಾ ಏಕೆ ಕೂಡಲೇ ಕಾರ್ಯಪ್ರವೃತ್ತರಾಗಿ ಹಿಂಸಾಚಾರವನ್ನು ತಡೆಯಲಿಲ್ಲ. ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡಲು ಸಾಕಷ್ಟು ಸಮಯ ಹೊಂದಿದ್ದ ಅಮಿತ್ ಶಾಗೆ ಹಿಂಸಾಚಾರವನ್ನು ತಡೆಗಟ್ಟಲು, ಜನರ ಕಷ್ಟ ಸುಖ ಕೇಳಲು ಸಮಯವಿಲ್ಲವೇ ಎಂದು ಸಂಪಾದಕೀಯದಲ್ಲಿ ಶಿವಸೇನೆ ತಿವಿದಿದೆ.

SCROLL FOR NEXT