ದೇಶ

ಬಿಹಾರದಲ್ಲಿ ಎನ್ ಆರ್ ಸಿ ಅಗತ್ಯವಿಲ್ಲ: ಸಿಎಎ ವಿಚಾರದಲ್ಲಿ ಚರ್ಚೆಗೆ ಸಿದ್ಧ- ನಿತೀಶ್ ಕುಮಾರ್ 

Nagaraja AB

ಪಾಟ್ನಾ: ಎನ್ ಆರ್ ಸಿ ಹಾಗೂ ಸಿಎಎ ವಿಚಾರದಲ್ಲಿ ಮೌನ ಮುರಿದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಸ್ಸಾಂ ದೃಷ್ಟಿಯಲ್ಲಿಟ್ಟುಕೊಂಡು ಎನ್ ಆರ್ ಸಿ ಜಾರಿಯಾಗಿದ್ದರೂ ಇಡೀ ದೇಶಕ್ಕಲ್ಲ ಎಂದಿದ್ದಾರೆ.

ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)ಯನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ  ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಎನ್ ಆರ್ ಸಿಯನ್ನು ದೇಶಾದ್ಯಂತ ವಿಸ್ತರಿಸುವ ಹಿಂದೆ ಯಾವುದೇ  ತರ್ಕವಿಲ್ಲ ಎಂದು ಅನಿಸುತ್ತದೆ. ಸದನದಲ್ಲಿ ಎನ್ ಆರ್ ಸಿ ಹಾಗೂ ಸಿಎಎ ವಿಚಾರದಲ್ಲಿ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಚರ್ಚೆಯಲ್ಲಿ ಬರುವಂತಹ ಪ್ರತಿಕ್ರಿಯೆಯನ್ನು ಕೇಂದ್ರಸರ್ಕಾರಕ್ಕೆ ತಿಳಿಸಲಾಗುವುದು ಎಂದಿದ್ದಾರೆ.

ಬಿಹಾರದಲ್ಲಿ ಎನ್ಆರ್ ಸಿಯ ಅಗತ್ಯವಿಲ್ಲ ಎಂದು ಹೇಳಿರುವ ನಿತೀಶ್ ಕುಮಾರ್, ಸಾಮಾನ್ಯ ಜನಗಣತಿಯ ಹೊರತಾಗಿಯೂ ಜಾತಿ ಆಧಾರಿತ ಗಣತಿ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. 

ಮುಂದಿನ 10 ವರ್ಷಗಳ ಕಾಲ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ವಿಸ್ತರಿಸುವ ಹಿನ್ನೆಲೆಯಲ್ಲಿ  ಕರೆಯಲಾಗಿರುವ ಬಿಹಾರ ವಿಧಾನ ಪರಿಷತ್ ವಿಶೇಷ ಒಂದು ದಿನದ ಅಧಿವೇಶನದಲ್ಲಿ ಮಾತನಾಡಿದ ನಿತೀಶ್ ಕುಮಾರ್, 1930ರ ನಂತರ ಮಾಡದೆ ಇರುವ ಜಾತಿ ಆಧಾರಿತ ಗಣತಿ ಅಗತ್ಯ. ಈ ಗಣತಿಯನ್ನು ಬಿಹಾರದಲ್ಲಿ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿಆರ್ ವಿರುದ್ಧವಾಗಿ ಸದನದಲ್ಲಿ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಪಕ್ಷ ಆರ್ ಜೆಡಿ ಸದಸ್ಯರು ಸದನದ ಹೊರಗಡೆ ಪ್ರತಿಭಟನೆ ನಡೆಸಿದರು.

SCROLL FOR NEXT