ದೇಶ

1984ರ ಸಿಖ್ ವಿರೋಧಿ ದಂಗೆ: ಧಿಂಗ್ರಾ ಆಯೋಗ ವರದಿಯಂತೆ ಸೂಕ್ತ ಕ್ರಮ: ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಹೇಳಿಕೆ 

Sumana Upadhyaya

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ 186 ಕೇಸುಗಳ ತನಿಖೆ ನಡೆಸಿದ್ದ ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಎನ್ ಧಿಂಗ್ರಾ ನೇತೃತ್ವದ ವಿಶೇಷ ತನಿಖಾ ತಂಡ ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.


ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಅರ್ಜಿದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಆರ್ ಎಸ್ ಸೂರಿ ಇಂದು ಕೋರ್ಟ್ ಗೆ ಮಾಹಿತಿ ನೀಡಿ, ವಿಶೇಷ ತನಿಖಾ ತಂಡದ ವರದಿ ಪೊಲೀಸ್ ಅಧಿಕಾರಿಗಳಿಗೆ ಕಳಂಕ ತರುವ ರೀತಿಯಿದ್ದು ದಂಗೆಯಲ್ಲಿ ಭಾಗಿಯಾಗಿದ್ದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಹಾಕುವುದಾಗಿ ಹೇಳಿದ್ದಾರೆ.


ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ, ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


ಈ ಕೇಸಿನ ಸಂಬಂಧಿಸಿದ ದಾಖಲೆಗಳು ಸುಪ್ರೀಂ ಕೋರ್ಟ್ ನ ದಾಖಲಾತಿಯಲ್ಲಿದ್ದು ಅದನ್ನು ಸಿಬಿಐಗೆ ಹಿಂತಿರುಗಿಸಿದ ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.


ಅದಕ್ಕೆ ನ್ಯಾಯಪೀಠ ಗೃಹ ಸಚಿವಾಲಯಕ್ಕೆ ದಾಖಲೆಗಳನ್ನು ನೀಡಲು ಆದೇಶಿಸಿತು. 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರನ್ನು ಇಬ್ಬರು ಸಿಖ್ ಭದ್ರತಾ ಕಾವಲುಗಾರರು ಹತ್ಯೆ ಮಾಡಿದ ನಂತರ ಭುಗಿಲೆದ್ದ  ಸಿಖ್ ವಿರೋಧಿ ದಂಗೆಯಲ್ಲಿ ದೆಹಲಿಯೊಂದರಲ್ಲಿಯೇ 2,733 ಜನ ಮೃತಪಟ್ಟಿದ್ದರು.

SCROLL FOR NEXT