ತಿರುಮಲ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಯಲ್ಲಿ ಈವರೆಗೆ 140 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಬಹುತೇಕ ಪ್ರಕರಣಗಳು ಕಾರ್ಮಿಕರು ಮತ್ತು ಎಪಿಎಸ್‌ಪಿ ಭದ್ರತಾ ಸಿಬ್ಬಂದಿಯಲ್ಲಿ ಕಂಡು ಬಂದಿವೆ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಗುರುವಾರ ಇಲ್ಲಿ ತಿಳಿಸಿದ್ದಾರೆ.
ಇಲ್ಲಿನ ಅನ್ನಮಯ್ಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ -19 ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ತಿರುಮಲದಲ್ಲಿ ಭಕ್ತರಿಗೆ ಶ್ರೀವಾರಿ ದರ್ಶನ ಎಲ್ಲಾ ಮುಂದುವರಿಯಲಿದೆ. ಶ್ರೀವಾರಿ ದರ್ಶನದ ಪ್ರಸ್ತುತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕೊವಿಡ್ -19 ರ ಹಿನ್ನೆಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ತಿರುಮಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಟಿಟಿಡಿ ನೌಕರರ ಆರೋಗ್ಯ ಸುರಕ್ಷತೆಯನ್ನು ಕಾಪಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಟಿಟಿಡಿಯಲ್ಲಿ ಪತ್ತೆಯಾದ ಒಟ್ಟು 140 ಪ್ರಕರಣಗಳ ಪೈಕಿ 14 ಮಂದಿ ಅರ್ಚಕರು ಇದ್ದು, 16 ಮಂದಿ ಲಡ್ಡು ತಯಾರಿಕಾ ಘಟಕದ ಸಿಬ್ಬಂದಿಗಳು, 56 ಮಂದಿ ಭದ್ರತಾ ಸಿಬ್ಬಂದಿಗಳೂ ಕೂಡ ಸೇರಿದ್ದಾರೆ ಎನ್ನಲಾಗಿದೆ. ಸೋಂಕು ಪೀಡಿತರ ಪೈಕಿ 70 ಸಿಬ್ಬಂದಿ ಚೇತರಿಸಿಕೊಂಡಿದ್ದು, ಇವರು ಮನೆಗಳಲ್ಲೇ ಸಂಪರ್ಕತಡೆಯಲ್ಲಿದ್ದಾರೆ. ಇನ್ನೂ ಕೆಲವರು ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಸುಬ್ಬಾರೆಡ್ಡಿ ಅವರು ಹೇಳಿದರು.