ದೇಶ

ಭಾರತ ದುರ್ಬಲ ದೇಶವಲ್ಲ, ವಿಶ್ವದ ಯಾವುದೇ ಶಕ್ತಿ ನಮ್ಮ ಭೂಪ್ರದೇಶದ ಒಂದಿಂಚೂ ಮುಟ್ಟಲಾಗದು: ರಾಜನಾಥ್ ಸಿಂಗ್

Sumana Upadhyaya

ನವದೆಹಲಿ / ಲಡಾಖ್ :ಭಾರತವು ಪೂರ್ವ ಲಡಾಕ್ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಗೌರವಿಸುತ್ತದೆ ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಶ್ವದ ಯಾವುದೇ ಶಕ್ತಿಯು ಭಾರತದ ಭೂಪ್ರದೇಶವನ್ನು ಮುಟ್ಟಲಾಗುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡಿದ್ದಾರೆ.

ಲಡಾಖ್ ಮತ್ತು ಶ್ರೀನಗರಕ್ಕೆ 2 ದಿನಗಳ ಭೇಟಿಯಲ್ಲಿರುವ ಸಚಿವರು ಇಂದು ಲೇಹ್‌ಗೆ ಆಗಮಿಸಿದ್ದು, ಟಿ -90 ಟ್ಯಾಂಕ್‌ಗಳು ಮತ್ತು ಯುದ್ಧ ವಾಹನಗಳ ವ್ಯಾಯಾಮ, ಕಸರತ್ತನ್ನು ಲೇಹ್‌ನ ಸ್ಟಕ್ನಾದಲ್ಲಿ ವೀಕ್ಷಿಸಿದರು.

ಲುಕುಂಗ್ ಫಾರ್ವರ್ಡ್ ಬೇಸ್‌ನಲ್ಲಿರುವ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಐಟಿಬಿಪಿಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, “ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ ಆದರೆ ಅದನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದೆಂದು ನಾನು ಖಾತರಿಪಡಿಸುವುದಿಲ್ಲ. ನಾನು ನಿಮಗೆ ಭರವಸೆ ನೀಡಬಲ್ಲೆ, ನಮ್ಮ ಭೂಮಿಯ ಒಂದು ಇಂಚು ಸಹ ಜಗತ್ತಿನ ಯಾವುದೇ ಶಕ್ತಿಯಿಂದ ಕಸಿದುಕೊಳ್ಳಲಾಗುವುದಿಲ್ಲ. ಮಾತುಕತೆಯಿಂದ ಪರಿಹಾರವನ್ನು ಕಂಡುಹಿಡಿಯಬಹುದಾದರೆ, ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ” ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾದ ಸೈನಿಕರ ನಡುವಿನ ಗಲ್ವಾನ್ ಕಣಿವೆಯ ಘರ್ಷಣೆಯ ಕುರಿತು ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು.

SCROLL FOR NEXT