ದೇಶ

ಅಸ್ಸಾಂ ಪ್ರವಾಹದಲ್ಲಿ 129 ವನ್ಯಮೃಗಗಳ ಸಾವು, ಕಾಜಿರಂಗ ಅರಣ್ಯ ಜಲಾವೃತ!

Srinivasamurthy VN

ಗುವಾಹತಿ: ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಕಾಜಿರಂಗ ಹುಲಿ ಸಂರಕ್ಷಿತಾರಣ್ಯ ಬಹುತೇಕ ನೀರಿನಲ್ಲಿ ಮುಳುಗಿದ್ದು, ಪರಿಣಾಮ ಪ್ರವಾಹದಲ್ಲಿ ಈ ವರೆಗೂ 129 ವನ್ಯಮೃಗಗಳು ಸಾವನ್ನಪ್ಪಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಅಸ್ಸಾಂನ 30 ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಭೀಕರ ಪ್ರವಾಹ ಉಂಟಾಗಿದೆ. ಇದರಿಂದ 26.38 ಲಕ್ಷ ಜನರು ಬಾಧಿತರಾಗಿದ್ದಾರೆ. ಮಳೆ ಮತ್ತು ಪ್ರವಾಹ ಸಂಬಂಧಿತ ವಿವಿಧ ದುರ್ಘಟನೆಗಳಲ್ಲಿ ಅಸ್ಸಾಂನಲ್ಲಿ ಈ ವರೆಗೂ 123 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 97 ಮಂದಿ ಪ್ರವಾಹದಲ್ಲಿ ಮೃತಪಟ್ಟಿದ್ದರೆ, 26  ಮಂದಿ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಇನ್ನು ಪ್ರವಾಹದಲ್ಲಿ ಜನರು ಮಾತ್ರರಲ್ಲದೇ ಅರಣ್ಯ ಜೀವಿಗಳೂ ಸಹ ಪ್ರಾಣ ಕಳೆದುಕೊಂಡಿವೆ, ದೇಶದ ಪ್ರಖ್ಯಾತ ಕಾಜಿರಂಗ ಹುಲಿ ಸಂರಕ್ಷಿತಾರಣ್ಯದಲ್ಲಿ 129 ವನ್ಯಮೃಗಗಳು ಸಾವನ್ನಪ್ಪಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನ ಮುಳುಗಡೆಯಾಗಿದ್ದು, 129 ಪ್ರಾಣಿಗಳು ಮೃತಪಟ್ಟಿವೆ. 170 ಪ್ರಾಣಿಗಳನ್ನು ರಕ್ಷಿಸಲಾಗಿದೆ.  ಖಡ್ಗಮೃಗಗಳ ಮುಖ್ಯ ಆವಾಸ ಸ್ಥಾನ ಎನಿಸಿರುವ ಉದ್ಯಾನದಲ್ಲಿ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಮೃತ ಪ್ರಾಣಿಗಳ ಪೈಕಿ 14 ಖಡ್ಗಮೃಗಗಳು, 5 ಕಾಡು ಎಮ್ಮೆಗಳು, 8 ಕಾಡುಹಂದಿಗಳು, 2 ಜೌಗು ಜಿಂಕೆ, 95 ಹಾಗ್ ಜಿಂಕೆ, 1 ಸಾಂಬಾರ್, 3 ಮುಳ್ಳುಹಂದಿಗಳು ಮತ್ತು 1 ಪೈಥಾನ್ ಸೇರಿವೆ ಎನ್ನಲಾಗಿದೆ.

SCROLL FOR NEXT