ದೇಶ

ಲಡಾಖ್ ಗಡಿಯಿಂದ ಸೇನೆ ಹಿಂಪಡೆಯುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ: ಚೀನಾ ಹೇಳಿಕೆ ತಳ್ಳಿಹಾಕಿದ ಭಾರತ

Lingaraj Badiger

ನವದೆಹಲಿ: ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನಾ ಎರಡೂ ದೇಶಗಳ ಸೇನಾಪಡೆಗಳು ಸಂಪೂರ್ಣ ಹಿಂದೆ ಸರಿದಿವೆ ಎಂಬ ಚೀನಾ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಭಾರತ, ಸೇನೆ ಹಿಂಪಡೆಯುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಪೂರ್ಣಗೊಂಡಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದೆ.

ಎರಡು ದಿನಗಳ ಹಿಂದಷ್ಟೇ, ಉಭಯ ದೇಶಗಳ ಮುಂಚೂಣಿ ಗಡಿ ಪಡೆಗಳು ಈಗಾಗಲೇ ಬಹುತೇಕ ಸೇನಾ ನೆಲೆಗಳಲ್ಲಿ ನಿಷ್ಕ್ರಿಯತೆಯನ್ನು ಪೂರ್ಣಗೊಳಿಸಿವೆ. ಲಡಾಖ್ ಗಡಿಯಲ್ಲಿರುವ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯಲಾಗಿದೆ ಎಂದು ಚೀನಾ ಹೇಳಿತ್ತು.

ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್​​​ ಶ್ರೀವಾಸ್ತವ ಅವರು, ಉಭಯ ದೇಶಗಳ ಸೇನಾಪಡೆಗಳು ಲಡಾಖ್​​ ಗಡಿಯ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಚೀನಾ ಹೇಳಿದಂತೆ ಸಂಪೂರ್ಣ ಮುಗಿದಿಲ್ಲ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಎರಡು ದೇಶಗಳ ಹಿರಿಯ ಸೇನಾಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಜ್ಜಾಗಿವೆ. ಇಲ್ಲಿ ಶಾಂತಿ ಮಾತುಕತೆಗಳ ಮೂಲಕವೇ ಸಮಸ್ಯೆ ಪರಿಹಾರ ಕಾಣಬೇಕು. ಎರಡೂ ರಾಷ್ಟ್ರಗಳ ಸೇನೆಗಳು ಲಡಾಖ್​​ ಗಡಿಯಿಂದ ಹೇಗೆ ಹಿಂದೆ ಸರಿಯಬೇಕು? ಎಂಬುದನ್ನು ಚರ್ಚಿಸಲಿವೆ ಎಂದು ಅನುರಾಗ್​​ ಶ್ರೀವಾಸ್ತವ ಹೇಳಿದ್ದಾರೆ.

ಲಡಾಖ್ ಗಡಿಯಿಂದ ಬಹುತೇಕವಾಗಿ ಸೈನ್ಯ ತುಕಡಿಗಳನ್ನು ಹಿಂಪಡೆಯಲಾಗಿದೆ ಎಂಬ ಚೀನಾದ ಘೋಷಣೆಯನ್ನು ತಳ್ಳಿಹಾಕಿರುವ ಭಾರತ, ಈ ಹೇಳಿಕೆ ಸರಿಯಲ್ಲ ಎಂದು ಹೇಳಿದೆ.

SCROLL FOR NEXT