ದೇಶ

ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ದಲಿತ ಶ್ರೀಗಳನ್ನು ಆಹ್ವಾನಿಸಿ: ಮಾಯಾವತಿ

Lingaraj Badiger

ಲಖನೌ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದಲಿತ ಶ್ರೀಗಳಾದ ಮಹಾಮಂಡೇಶ್ವರ ಕನ್ಹಯ್ಯ ಪ್ರಭುನಂದನ್ ಗಿರಿ ಅವರಿಗೆ ಆಹ್ವಾನ ನೀಡಬೇಕು ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಶುಕ್ರವಾರ ಒತ್ತಾಯಿಸಿದ್ದಾರೆ ಮತ್ತು ಇದು ಜಾತಿರಹಿತ ಸಮಾಜವನ್ನು ಸ್ಥಾಪಿಸುವ ಸಾಂವಿಧಾನಿಕ ಉದ್ದೇಶದ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಬಗ್ಗೆ ಗಿರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಮಾಯಾವತಿ ಅವರು ಈ ಹೇಳಿಕೆ ನೀಡಿದ್ದಾರೆ.

ಮಹಾಮಂಡೇಶ್ವರ ಸ್ವಾಮಿ ಕನ್ಹಯ್ಯ ಪ್ರಭುನಾಂದನ್ ಗಿರಿ ಅವರ ದೂರನ್ನು ಗಮನದಲ್ಲಿಟ್ಟುಕೊಂಡು, ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸ ಸಮಾರಂಭಕ್ಕೆ 200 ಇತರ ಸಂತರೊಂದಿಗೆ ದಲಿತ ಶ್ರೀಗಳನ್ನು ಆಹ್ವಾನಿಸಿದ್ದರೆ ಚೆನ್ನಾಗಿತ್ತು ಎಂದು ಮಾಯಾವತಿ ಅವರು ಟ್ವೀಟ್ ಮಾಡಿದ್ದಾರೆ.

ದಲಿತ ಶ್ರೀಗಳನ್ನು ಆಹ್ವಾನಿಸಿದರೆ ದೇಶದಲ್ಲಿ ಜಾತಿರಹಿತ ಸಮಾಜವನ್ನು ಸ್ಥಾಪಿಸುವ ಸಾಂವಿಧಾನಿಕ ಉದ್ದೇಶದ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಈ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಎಂಎಂ ಜೋಶಿ ಹಾಗೂ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.

SCROLL FOR NEXT